ಸ್ವಲ್ಪ ಖಾರ, ಸವಿಯೋಣ ಬಾರಾ: ಒಂದ್ ಪ್ಲೇಟ್ ಬಜ್ಜಿ with ಖಾರ ಜಾಮೂನ್

ಒಂದ್ ಪ್ಲೇಟ್ ಬಜ್ಜಿ ವಿಥ್ ಖಾರ ಜಾಮೂನ್ ತಿನ್ನೋ ಸ್ವರ್ಗ ಸುಖದ ಗಮ್ಮತ್ತೇ ಬೇರೆ, ಇಲ್ಲಿದೆ ನೋಡಿ, ಬಜ್ಜಿ ಹಾಗೂ ಖಾರ ಜಾಮೂನು ಮಾಡುವ ವಿಧಾನ. ಫ್ರೀ ಇದ್ದಾಗ ಮಾಡಿ ತಿನ್ನಿ ಆಮೇಲೆ ನೋಡಿ ಅದ್ರ ಸುಖ

ಅಕ್ಕಿ ಹುರಿಗಡಲೆ ಬಜ್ಜಿ ತಿಂದಿದ್ದೀರಾ?

ಬೇಕಾಗುವ ಸಾಮಗ್ರಿಗಳು: 

ಅಕ್ಕಿ ಹಿಟ್ಟು 1 ಪಾವು, ಹುರಿಗಡಲೆ ಅಥವಾ ಪುಟಾಣಿ ಪುಡಿ ಅರ್ಧ ಪಾವು, ಬೆಣ್ಣೆ ಒಂದು ಮುದ್ದೆ, ನಾಲ್ಕು ಟೀ ಚಮಚ ಎಣ್ಣೆ, ಇಂಗು ಹಸಿಮೆಣಸಿನಕಾಯಿ 2, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಉಪ್ಪು
ಮಾಡೋದ್ ಹೇಗೆ?
ಕರಿಬೇವಿನ ಎಲೆ ಹಾಗೂ ಮೆಣಸಿನಕಾಯಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಅಕ್ಕಿ ಹಿಟ್ಟು ಹಾಗೂ ಹುರಿಗಡಲೆ ಪುಡಿಯೊಂದಿಗೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿದ್ದರೆ ಮೆಣಸಿನ ಪುಡಿ ಹಾಕಿ, ಮೊದಲೇ ಮಾಡಿಟ್ಟುಕೊಂಡ ಪೇಸ್ಟ್ ಸೇರಿಸಿ ಬೆಣ್ಣೆ ಮತ್ತು ಕಾಯಿಸಿದ ಎಣ್ಣೆ ಹಾಕಿ ಸಮಪ್ರಮಾಣದಲ್ಲಿ ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಿಸಬೇಕು. 
ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟಿಗೆ ಸೇರಿಸಿ ಎಣ್ಣೆಗೆ ಬಿಡಬೇಕು.

————————————————————————————————–

ಮೂನ್ ಗಿಂತಲೂ ಚೆಂದ ಈ ಖಾರ ಜಾಮೂನು

ಬೇಕಾಗುವ ಸಾಮಗ್ರಿಗಳು: ಎಲೆಕೋಸು, ನೀರುಳ್ಳಿ, ಡೊಣಮೆಣಸು, ಕ್ಯಾರೆಟ್, ಅಕ್ಕಿಹಿಟ್ಟು, ಜೋಳದ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಮೆಣಸಿನಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಟೋಮೇಟೋ ಸಾಸ್, ಚಿಲ್ಲಿ ಸಾಸ್, ತುಪ್ಪ

ಮಾಡೋದ್ ಹೇಗೆ?
ಅಕ್ಕಿಹಿಟ್ಟು, ಮೈದಾ ಹಾಗೂ ಜೋಳದ ಹಿಟ್ಟನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು. ಎಲೆಕೋಸು, ನೀರುಳ್ಳಿ ಹಾಗೂ ಡೊಣಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ಎಲ್ಲಾ ತರಕಾರಿಗಳನ್ನು ಕಲೆಯಿಸಿಕೊಳ್ಳಬೇಕು. ಮೊದಲೇ ಮಾಡಿಟ್ಟುಕೊಂಡಿರುವ ಹಿಟ್ಟುಗಳ ಮಿಶ್ರಣವನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸಿನಪುಡಿ ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಯಿಸಬೇಕು. ನಂತರ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಎಣ್ಣೆಗೆ ಬಿಡಬೇಕು. ಕೆಂಪು ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯಿಂದ ಹೊರತೆಗೆಯಬೇಕು.

ಎಲೆಕೋಸು, ನೀರುಳ್ಳಿ ಹಾಗೂ ಡೊಣಮೆಣಸು ಇವುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಕ್ಯಾರೆಟ್ ನ್ನು ತುರಿದುಕೊಳ್ಳಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಕಾಯುತ್ತಿದ್ದಂತೆಯೇ ಕಾಳುಮೆಣಸಿನಪುಡಿ ಹಾಗೂ ಮೊದಲೇ ಹೆಚ್ಚಿಟ್ಟುಕೊಂಡ ಎಲೆಕೋಸು, ನೀರುಳ್ಳಿ, ಡೊಣಮೆಣಸು ಹಾಗೂ ಕ್ಯಾರೆಟ್ ಇವುಗಳನ್ನು ಹಾಕಿ ಹುರಿಯಬೇಕು. ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಲ್ಲಿ ಸಾಸ್, ಟೊಮೇಟೊ ಸಾಸ್ ಹಾಗೂ ಲಭ್ಯವಿದ್ದರೆ ಸೋಯಾ ಸಾಸ್ ಸೇರಿಸಬೇಕು. ನಂತರ ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಬೇಕು. ಜೋಳದ ಹಿಟ್ಟು ಅಥವಾ ಕಾರ್ನ್ ಫ್ಲೋರ್ ನ್ನು ನೀರಿನಲ್ಲಿ ಕದರಿ, ಕುದಿ ಬರುತ್ತಿದ್ದಂತೆ ಸೇರಿಸಬೇಕು. 5 ನಿಮಿಷ ಚೆನ್ನಾಗಿ ಕುದಿಯಲು ಬಿಟ್ಟರೆ ಬಿಸಿ ಬಿಸಿ ಸೂಪ್ ತಯಾರಾಗುತ್ತದೆ. ಇದಕ್ಕೆ ಮೊದಲೇ ತಯಾರಿಸಿಟ್ಟುಕೊಂಡಿರುವ ಬೋಂಡಾ ಹಾಕಿ ತಿನ್ನಬಹುದು.

ಚಿತ್ರ-ಬರಹ

-ಬಿ.ಸಂ.ಸುವರ್ಚಲಾ