ಕುಂದಾಪುರ: ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳು ಹಾಗೂ ಸ್ವರೂಪಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೃತಕ ರಾಸಾಯನಿಕ ಗೊಬ್ಬರಗಳ ಬಳಕೆ ಹಾಗೂ ವಿಷಪೂರಿತ ತ್ಯಾಜ್ಯದಿಂದಾಗಿ ಮಣ್ಣಿನ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿಯಾದ ವಿಷಯ ಎಂದು ಇಶಾ ಫೌಂಡೇಶನ್ ಕೊಯಮುತ್ತೂರು ಇದರ ಸ್ವಯಂ ಸೇವಕರಾದ ಶ್ರೀ ಬಿ.ಎನ್. ವೆಂಕಟೇಶ್ ಹೇಳಿದರು.
ಅವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಇಶಾ ಫೌಂಡೇಶನ್ ಆಯೋಜಿಸಿದ ಮಣ್ಣು ಉಳಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣನ್ನು ರಕ್ಷಿಸುವುದರ ಜೊತೆಗೆ ಭವಿಷ್ಯದ ದಿನಗಳಲ್ಲಿ ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯ. ಆ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಶ್ರೀ ಜಗ್ಗಿ ವಾಸುದೇವ್ರವರ ಈ ಮಣ್ಣು ಉಳಿಸಿ ಜಾಗತಿಕ ಅಭಿಯಾನಕ್ಕೆ ನಾವೆಲ್ಲರೂ ಕೈ ಜೋಡಿಸಬೇಕೆಂದು ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ವಂದಿಸಿದರು. ಎನ್.ಎಸ್.ಎಸ್. ಸ್ವಯಂ ಸೇವಕಿ ಶಬರಿ ಪ್ರಾರ್ಥಿಸಿದರು. ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕಿ ಅನುಷಾ ನಿರೂಪಿಸಿದರು.
ಇಶಾ ಫೌಂಡೇಶನ್ ಕೊಯಮುತ್ತೂರು ಇದರ ಸ್ವಯಂ ಸೇವಕರಾದ ನೇಹಾ, ಪ್ರಖ್ಯಾತ್, ವಿಶಾಲ್, ಪ್ರಸನ್ನ, ಪ್ರವೀಣ್ ಹಾಗೂ ಕಾಲೇಜಿನ ಭೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.