ಆಕ್ಷೇಪಾರ್ಹ ಬರಹ ಪ್ರಕಟಿಸಿದ ಆರೋಪ: ಸೌದಿಯಲ್ಲಿ ಹರೀಶ್ ಬಂಗೇರ ಬಂಧನ ಬಿಡುಗಡೆಗೆ ನೆರವು ಕೋರಿ ಕುಟುಂಬಸ್ಥರು ಎಸ್ಪಿಗೆ ಮನವಿ

ಉಡುಪಿ: ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹ ಪ್ರಕಟಿಸಿದ ಆರೋಪದ ಮೇಲೆ ಸೌದಿಅರೆಬೀಯಾದಲ್ಲಿ ಬಂಧನಕ್ಕೊಳಗಾಗಿರುವ ಕೋಟೇಶ್ವರ ಬೀಜಾಡಿ ಗ್ರಾಮದ ನಿವಾಸಿ ಹರೀಶ್‌ ಬಂಗೇರ ಅವರನ್ನು ಬಿಡುಗಡೆಗೊಳಿಸಲು ನೆರವು ಕೋರಿ ಕುಟುಂಬಸ್ಥರು ಎಸ್ಪಿ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.
ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ಕೆಲ ಕಿಡಿಗೇಡಿಗಳು ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಪತಿಯನ್ನು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಬಿಡುಗಡೆಗೆ ಸರ್ಕಾರ ಕೂಡಲೇ ನೆರವು ನೀಡಬೇಕು ಎಂದು ಹರೀಶ್‌ ಬಂಗೇರ ಅವರ ಪತ್ನಿ ಸುಮನಾ ಮನವಿ ಮಾಡಿದರು.
ಹರೀಶ್‌ ಅವರು ಡಿ. 19ರಂದು ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಪೌರತ್ವ ಕಾಯ್ದೆಗೆ ಸಂಬಂಧಿಸಿದ ವೀಡಿಯೊಂದನ್ನು ಶೇರ್‌ ಮಾಡಿಕೊಂಡಿದ್ದರು. ಆ ಬಳಿಕ ಯಾರೋ ಕಿಡಿಗೇಡಿಗಳು ಹರೀಶ್‌ ಅವರ ಫೇಸ್‌ಬುಕ್‌ ಖಾತೆಯ ವಿವರ ಹಾಗೂ ಪೋಟೊಗಳನ್ನು ಸ್ಕ್ರೀನ್‌ ಶಾಟ್‌ ತೆಗೆದು ಮಂಗಳೂರಿನ ಕೆಲವೊಂದು ಮುಸ್ಲಿಮ್‌ ಗ್ರೂಪ್‌ಗಳಿಗೆ ಹಾಕಿದ್ದರು. ಈ ಬಗ್ಗೆ ಪತಿಯ ಬಳಿ ವಿಚಾರಿಸಿದೆ. ಆಗ ಅವರು ಹೌದು ಈ ರೀತಿ ಸಮಸ್ಯೆ ಆಗಿರುವುದು ನಿಜ. ಈ ಬಗ್ಗೆ ಹಲವಾರು ಬೆದರಿಕೆ ಕರೆಗಳು ಬಂದಿವೆ ಎಂದಿದ್ದರು. ಬಳಿಕ ಕ್ಷಮೆ ಕೋರಿ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿ ಫೇಸ್‌ಬುಕ್‌ ಖಾತೆಯನ್ನು ಡಿ ಆ್ಯಕ್ಟಿವೇಟ್‌ಗೊಳಿಸಿದ್ದರು ಎಂದು ಸುಮನ
ತಿಳಿಸಿದರು.
ಈ ಘಟನೆಯ ಬಳಿಕ ಡಿ. 20ರಂದು ಯಾರೋ ಕಿಡಿಗೇಡಿಗಳು ಹರೀಶ್‌ ಬಂಗೇರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಯನ್ನು ಸೃಷ್ಟಿಸಿದ್ದರು. ಅದರಲ್ಲಿ ಸೌದಿ ದೊರೆಗೆ ಅವಹೇಳನಕಾರಿ ಬರೆದು ಪೋಸ್ಟ್‌ ಮಾಡಿದ್ದರು. ಅಲ್ಲದೆ, ಮೆಕ್ಕಾ ಮಸೀದಿಯನ್ನು ರಾಮಮಂದಿರ ಮಾಡುತ್ತೇವೆ. ಇದಕ್ಕೆ ಪ್ರಧಾನಿ ಮೋದಿ ಬೆಂಬಲ ಇದೆ ಎಂಬಂತಹ ಪೋಸ್ಟ್‌ಗಳನ್ನು ಹಾಕಿದ್ದರು. ಅದನ್ನು ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ವೈರಲ್‌ ಮಾಡಿದ್ದರು. ಇದಕ್ಕೆ ಕೆಲವು ಇತನನ್ನು ಸುಮ್ಮನೆ ಬಿಡಬಾರದು. ಇದನ್ನು ಸೌದಿ ಪೊಲೀಸರಿಗೆ ಮುಟ್ಟುವವರಿಗೆ ಶೇರ್‌ ಮಾಡಬೇಕೆಂದು ಕಮೆಂಟ್‌ಗಳನ್ನು ಹಾಕಿದ್ದರು ಎಂದು ಹೇಳಿದರು
ಡಿ. 21ರಂದು ನಾನು ಉಡುಪಿಯ ಸೆನ್‌ ಕಚೇರಿಗೆ ತೆರಳಿ ನಕಲಿ ಖಾತೆ ಸೃಷ್ಟಿಸಿ, ಅವಹೇಳನಕಾರಿ ಆದ ಪೋಸ್ಟ್‌ಗಳನ್ನು ಹಾಕಿದ್ದ ಬಗ್ಗೆ ದೂರು ನೀಡಿದ್ದೇನೆ. ಹಾಗೆಯೇ ಪತಿಯೂ ತಾನು ಕೆಲಸ ಮಾಡುವ ಕಂಪೆನಿಯ ಅಧಿಕಾರಿಗಳ ಅನುಮತಿ ಪಡೆದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಬಳಿಕ ಅವರ ಸಂಪರ್ಕ ಸಿಕ್ಕಿಲ್ಲ. ಅವರ ಸ್ನೇಹಿತರೊಬ್ಬರು ಕರೆ ಮಾಡಿ, ಹರೀಶ್‌ ವಿಚಾರಣೆಯಲ್ಲಿದ್ದು, ಮೊಬೈಲ್‌ ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ. ಅವರು ದೂರು ನೀಡಲು ಹೋಗಿರುವ ಪೋಟೊವನ್ನು ತೆಗೆದು ನಕಲಿ ಖಾತೆಯಲ್ಲಿ
ಬಂಧನ ಆಗಿದೆಯೆಂದು ಪೋಸ್ಟ್‌ ಹಾಕಿದ್ದಾರೆ. ಡಿ. 22ರಂದು ಫೇಸ್‌ಬುಕ್‌ ಡಿಲೀಟ್‌ ಆಗಿದೆ. ಇದು ಕಾಸರಗೋಡಿನಲ್ಲಿ ಕ್ರಿಯೇಟ್‌ ಆಗಿದೆ ಎಂದು ಸೆನ್‌ ಪೊಲೀಸರು ತಿಳಿಸಿದ್ದಾರೆ ಎಂದರು.