ತ್ರಿಪದಿಗಳ ಮೂಲಕ ಬದುಕಿನ ಅರಿವು ಮೂಡಿಸಿದ ಕವಿ ಸರ್ವಜ್ಞ: ವೀಣಾ ಬಿ.ಎನ್

ಉಡುಪಿ: ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.

ಅವರು ಸೋಮವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ, ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. ಸರ್ವಜ್ಞ ಕವಿಯು, ವಿದ್ಯೆ, ಕೃಷಿ ಹಾಗೂ ಜೀವನದ ಕುರಿತ ಆಳವನ್ನು ಅಳೆಯುವುದರ ಮೂಲಕ ದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಜಾಸ್ತಿ ಇದ್ದು, ಶ್ರೀಸಾಮಾನ್ಯರಿಗೂ ಅರ್ಥವಾಗುತ್ತವೆ. ಸರ್ವಜ್ಞರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವಂತ ಕೆಲಸವನ್ನು ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ತ್ರಿಪದಿ ಎಂದರೆ ಮೂರು ಸಾಲುಗಳ ಕವಿತೆ. ಆದ್ದರಿಂದ ಸರ್ವಜ್ಞನನ್ನು ತ್ರಿಪದಿ ಕವಿ ಎನ್ನುತ್ತಾರೆ. ಸರ್ವಜ್ಞನ ತ್ರಿಪದಿಗಳು ಸುಮಾರು 2000 ಕ್ಕಿಂತಲೂ ಹೆಚ್ಚಿವೆ ಎಂದು ಊಹಿಸಲಾಗಿದ್ದು, ಸದ್ಯ 1000 ರಷ್ಟು ದೊರೆತಿವೆ ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ್ ಕುಲಾಲ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಗುಡಿ ಕೈಗಾರಿಕೆ ಅಧ್ಯಕ್ಷ ಸಂತೋಷ್ ಕುಲಾಲ್, ಜಿಲ್ಲಾ ಕುಂಬಾರ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಸುಧಾಕರ್ ಕುಲಾಲ್ ವಂದಿಸಿದರು.