ಸರ್ಕಾರದಿಂದ ರೈತರ ಕಡೆಗಣನೆ: ಭಾಕಿಸಂ ಆಕ್ರೋಶ

ಉಡುಪಿ: ಜಿಲ್ಲೆಯ ರೈತರ ಪ್ರಮುಖ ಬೇಡಿಕೆಗಳಾದ ಕುಮ್ಕಿ ಭೂಮಿ, ಗೇರು ಲೀಸ್‌ ಭೂಮಿಗಳ ಮಂಜೂರಾತಿ, ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭ, ವಾರಾಹಿ ನೀರಾವರಿ ಯೋಜನೆಯ ಶೀಘ್ರ ಅನುಷ್ಠಾನ ಹಾಗೂ ಕಸ್ತೂರಿ ರಂಗನ್‌ ವರದಿ ಅನುಷ್ಠಾನದ ತೊಡಕುಗಳಿಗೆ ಸಂಬಂಧಿಸಿದಂತೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ
ರೈತರು ತೀವ್ರ ಸಂಕಷ್ಟಗೀಡಾಗಿದ್ದಾರೆ ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಸರ್ಕಾರವು ರೈತರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಭಾಕಿಸಂ ಅಸಮಾಧಾನ ವ್ಯಕ್ತಪಡಿಸಿದೆ.
ರೈತರ ಬೇಡಿಕೆಗಳ ಕುರಿತಂತೆ ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಸಚಿವರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಿದ ಮನವಿಗಳು ಮೂಲೆಗುಂಪಾಗಿವೆ. ಜಿಲ್ಲೆಯ ಶಾಸಕರನ್ನು ಕೇಳಿದರೆ ಸಚಿವರಿಗೆ ಮನವಿ ನೀಡಿ ಎಂದು ಹೇಳುತ್ತಾರೆ. ಆದರೆ ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ಉಸ್ತುವಾರಿ ಸಚಿವರನ್ನು ಭೇಟಿ ಮಾಡುವುದೇ ಕಷ್ಟವಾಗಿದ್ದು, ಎರಡು ಬಾರಿ ಭೇಟಿ ಮಾಡಿ ಮನವಿ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದೆ.
ಕುಮ್ಕಿ ಭೂಮಿಗಳ ಮಂಜೂರಾತಿಗೆ ಶಾಸಕರು, ಸಚಿವರು ಪ್ರಯತ್ನಿಸುತ್ತಿಲ್ಲ. ಗೇರುಲೀಸ್‌ ಭೂಮಿಗಳನ್ನು ರೈತರಿಗೆ ನೀಡಲು ಜಿಲ್ಲಾಡಳಿತ ನಿರಾಕರಿಸುತ್ತಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಸಂಬಂಧಿಸಿದಂತೆ ಯಾವುದೇ ದಿಟ್ಟ ಕ್ರಮ ಆಗುತ್ತಿಲ್ಲ. ಕಸ್ತೂರಿರಂಗನ್‌ ವರದಿ ಹಂತ ಹಂತವಾಗಿ ಜಾರಿಯಾಗುತ್ತಿದೆ. ಈ ಬಗ್ಗೆ ಶಾಸಕರು ಧ್ವನಿ ಎತ್ತುತ್ತಿಲ್ಲ. ರೈತರ ಅಳಲನ್ನು ಕೇಳಲು ಜಿಲ್ಲೆಯಲ್ಲಿ ಯಾವ ಜನಪ್ರತಿನಿಧಿಯೂ ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದೆ.
ಸಭೆಯಲ್ಲಿ ಭಾಕಿಸಂ ರಾಜ್ಯ ರಾಜ್ಯಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ ಭಟ್‌, ವಾಸುದೇವ ಶಾನುಭಾಗ್‌, ಸತ್ಯನಾರಾಯಣ ಉಡುಪ ಅಭಿಪ್ರಾಯ ಮಂಡಿಸಿದರು.
ಜಿಲ್ಲಾ ಸಮಿತಿಯ ಸದಸ್ಯರಾದ ಪದ್ಮನಾಭ ಶೆಟ್ಟಿ, ಸದಾನಂದ ಶೆಟ್ಟಿ, ಆಸ್ತೀಕ ಶಾಸ್ತ್ರಿ, ಪಾಂಡುರಂಗ ಹೆಗ್ಡೆ, ರಾಮಚಂದ್ರ ಪೈ, ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ಉಮಾನಾಥ ರಾನಡೆ, ಸೀತಾರಾಮ ಗಾಣಿಗ, ಚಂದ್ರಹಾಸ ಶೆಟ್ಟಿ, ಪ್ರಾಣೇಶ್‌ ಯಡಿಯಾಳ್‌
ಉಪಸ್ಥಿತರಿದ್ದರು.