ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಳ: ಶೀಘ್ರ ಪ್ರಸ್ತಾವ

ಬೆಂಗಳೂರು: ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಈ‌ ಹಿಂದೆ ಶೇ 18ರಷ್ಟು ಪ್ರಯಾಣ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಮತ್ತೆ ಪ್ರಸ್ತಾವ ಸಲ್ಲಿಸಿ ವಿವೇಚನೆಗೆ ಅನುಸಾರವಾಗಿ ದರ ಏರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು.

ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಸಾರಿಗೆ ನಿಗಮಗಳ ಆಡಳಿತ ನಿರ್ದೇಶಕರು ಪ್ರಯಾಣ ದರ ಏರಿಸುವಂತೆ ಒತ್ತಾಯಿಸಿದ್ದಾರೆ. ಡೀಸೆಲ್ ದರ ಹೆಚ್ಚಳವಾಗಿರುವುದರಿಂದ ಸಾರಿಗೆ ನಿಗಮಗಳು ಸುಮಾರು ₹ 677 ಕೋಟಿ ನಷ್ಟ ಅನುಭವಿಸುತ್ತಿವೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಅವರಿಗೆ ಸದ್ಯದ ವಾಸ್ತವ ಚಿತ್ರಣ ತಿಳಿಸಿ ದರ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ’ ಎಂದರು.