ಸರಿಗಮಪ ರಿಯಾಲಿಟಿ ಶೋ ಫೈನಲ್‌ ಪ್ರವೇಶಕ್ಕೆ ಟಿಆರ್ಪಿ‌ ಮಾನದಂಡವಾಯ್ತೆ?:ನೈಜ ಪ್ರತಿಭೆಗಳಿಗೆ ಮನ್ನಣೆ ಕೊಡದ ಚಾನೆಲ್, ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಗರಂ

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮದಾನ ವ್ಯಕ್ತವಾಗಿದ್ದು, ಕೇವಲ‌ ಟಿಆರ್ಪಿಯೇ ಮಾನದಂಡವೇ  ಎಂದು‌ ಹಲವರು ಪ್ರಶ್ನಿಸಿದ್ದಾರೆ.
ಸರಿಗಮಪದಲ್ಲಿ ಫೈನಲ್ ಗೆ ಆಯ್ಕೆಯಾಗದ ಸ್ಪರ್ಧಿಗಳನ್ನು ಕಂಡು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಜ ಗಾಯಕರನ್ನು ಅಂತಿಮ ಘಟ್ಟಕ್ಕೆ ಆಯ್ಕೆ ಮಾಡದೇ ವಿನ್ನರ್ ಯಾರೆಂದು ಮೊದಲೇ ಫಿಕ್ಸ್ ಆಗಿರುತ್ತದೆ ಎನ್ನುವ ವಿಚಾರ ಹರಿದಾಡುತ್ತಿದೆ.
ಎಲ್ಲವೂ ಮಾರ್ಕೆಟಿಂಗ್ ಗುರು:
ತೀರ್ಪುಗಾರರಿಗೆ ಗೊತ್ತಾಗದ ಹಾಗೆ ಮಾರ್ಕೆಟಿಂಗ್ ಅನ್ನೋ ಗುಪ್ತಗಾಮಿನಿಯೊಂದು ವೀಕ್ಷಕರಿಗೆ ಗೊತ್ತಾಗದಂತೆ ಕೆಲಸ ಮಾಡುತ್ತಿರುತ್ತದೆ. ಯಾರನ್ನು ವಿನ್ನರ್ ಮಾಡಬಹುದು?ಯಾಕೆ ಮಾಡಬೇಕು? ಯಾರನ್ನು ಹೈಲೈಟ್ ಮಾಡಬೇಕು, ಮಾಡಬಾರದು ಎನ್ನುವ ಕುರಿತು ಚಾನಲ್ ಮುಖ್ಯಸ್ಥರು ಅವರದ್ದೇ ಆದ ಮಾಸ್ಟರ್ ಮೈಂಡ್ ಬಳಸುತ್ತಾರೆ. ಇವೆಲ್ಲವೂ ಮುಗ್ದ ಹಾಡುಗಾರರಿಗೆ ತಿಳಿದಿರುವುದಿಲ್ಲ. ಪ್ರಾಮಾಣಿಕವಾಗಿ ಹಾಡಿ , ತಮ್ಮ ಪ್ರತಿಭೆ ಪ್ರದರ್ಶನ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲ. ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ, ವೆಬ್ ಸೈಟ್ ನಲ್ಲಿ ಕೆಲವೊಬ್ಬರನ್ನು ಮಾತ್ರ ಜಾಸ್ತಿ ಹೈಲೈಟ್ ಮಾಡಲಾಗುತ್ತದೆ. ಅವರನ್ನೇ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ ಎನ್ನುವುದು ತುಂಬಾ ಜನರ ಆರೋಪ.
ಈ ಸೀಸನ್ ನಲ್ಲಿ ಹಳ್ಳಿಯ ಮುಗ್ದ ಹನುಮಂತಪ್ಪನನ್ನು ಬಳಸಿಕೊಂಡು ಪ್ರಾರಂಭದಿಂದಲೇ ಟೀಆರ್ಪಿ‌ ಹೆಚ್ಚಿಸುತ್ತಿದೆ ಎನ್ನುವ ಮಾತು‌ ಕೇಳಿ ಬರುತ್ತಿತ್ತು. ಸದ್ಯ‌ ಅಂತಿಮ ‌ಹಂತದಲ್ಲಿ  ಪೃಥ್ವಿ ಭಟ್, ರಜತ್ ಮಯ್ಯರಂತಹ ಪ್ರತಿಭೆಗಳನ್ನು ಆಯ್ಕೆ ಮಾಡದೇ ಮುಗ್ಧತೆಯಿಂದಲೇ ವೀಕ್ಷಕರನ್ನು ಸೆಳೆದ ಹಳ್ಳಿ ಹಾಡಿನ ಸರದಾರ ಹನುಮಂತಪ್ಪ ಮೊದಲಾದವರನ್ನು ಆಯ್ಕೆ ಮಾಡಿರುವುದು ಹಲವರು   ಅಸಮಾಧಾನ ಪಡುವಂತಾಗಿದೆ. ಒಟ್ಟಾರೆ ಪ್ರತಿಭೆಗಳಿಗಿದು ಕಾಲವಲ್ಲ ಎನ್ನುವುದು ಕನ್ನಡದ ಕೆಲ ವಾಹಿನಿಗಳು ಪ್ರತಿಭೆಗೆಗಳಿಗೆ ಮನ್ನಣೆ ಕೊಡದೇ ಮಾಡುವ ಟಿ. ಆರ್.ಪಿ ಗ್ ಗಿಮಿಕ್ ನಿಂದ ಇದು ಸಾಬೀತಾಗಿದೆ.
ಉಡುಪಿ ಎಕ್ಸ್ ಪ್ರೆಸ್ ಕಾಳಜಿ:
ನಿಮ್ಮ ಪ್ರತಿಭೆಗೆ ಬರೀ ವಾಹಿನಿಗಳೇ ವೇದಿಕೆಯಲ್ಲ.ಬೇರೆ ವೇದಿಕೆಗಳು ಸಾಕಷ್ಟಿವೆ. ಪ್ರಯತ್ನ ಪಟ್ಟರೆ ನೀವೇ ಒಂದೊಳ್ಳೆ ತಂಡ ಕಟ್ಟಿಕೊಂಡು ಇಡೀ ಜಗತ್ತಿಗೆ ನಿಮ್ಮ ಧ್ವನಿ, ಪ್ರತಿಭೆ ತೋರಿಸಬಹುದು. ಸರಿಗಮಪದಲ್ಲಿ ಅದ್ಬುತವಾಗಿ ಹಾಡಿದ ಉಜಿರೆಯ ರಜತ್ ಮಯ್ಯ ಅವರು ಉಡುಪಿಯಲ್ಲಿ “ಯುವತರಂಗ”ಅನ್ನೋ ಸಂಗೀತ ತಂಡ ಕಟ್ಟಿ ರಾಜ್ಯಾದ್ಯಂತ ಕಾರ್ಯಕ್ರಮ ನೀಡುತ್ತಿದ್ದಾರೆ.ಇವರ ತಂಡವನ್ನು ಫಾಲೋ ಮಾಡುವವರಿದ್ದಾರೆ.
ನಿಮ್ಮದೇ ಕ್ರಿಯಾಶೀಲ ಯೋಜನೆ ಬಳಸಿ ನಿಮ್ಮ ಪ್ರತಿಭೆಗೊಂದು ನೀವೇ ವೇದಿಕೆ ಸೃಷ್ಟಿ ಮಾಡಿ. ಒಂದು ದಿನ ನಿಮ್ಮ ಪ್ರತಿಭೆಗೆ ತಲೆಬಾಗಿ ನಿಮ್ಮ ಬದುಕಿಗೆ ದೊಡ್ಡದೊಂದು ಅವಕಾಶ ಕೊಡುವ ವ್ಯಕ್ತಿಗಳೇ ನಿಮ್ಮನ್ನು ಹುಡುಕಿಕೊಂಡು ಬರಬಹುದು.