ಸರಸ್ವತಿ ಪ್ರಭಾ ಪುರಸ್ಕಾರ -2024: ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಆಯ್ಕೆ

ಕುಂದಾಪುರ: ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ ಇತ್ಯಾದಿ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವ ನೀಡಿಯೂ ಕೊಂಕಣಿ ಭಾಷಾ ಸಮೂಹದಿಂದ ಗುರುತಿಸಲ್ಪಡದ ಅಪಾರ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆಗೆ 30ರಿಂದ 50 ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸ ಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ 
ಇದೀಗ  ಪ್ರಕಟಣೆಯ 35 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಯಮಿತ ಪ್ರಕಟಣೆಯ 36ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ “ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆಯು 2022ರಿಂದ  ವಯೋವೃದ್ಧ ಕೊಂಕಣಿ ಭಾಷಾ ಸಾಧಕರನ್ನು ಆಯ್ಕೆ ಮಾಡಿ “ಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ. 2024ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕುಂದಾಪುರದ 75 ವರ್ಷ ಪ್ರಾಯದ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್  ಅವರನ್ನು ಆಯ್ಕೆ ಮಾಡಲಾಗಿದೆ. 
     

ಕೊಂಕಣಿ ಲೇಖನ, ಸಂಗೀತ, ನಾಟಕ ರಚನೆ ಮತ್ತು ನಿರ್ದೇಶನ, ಜಾನಪದ ಸಾಹಿತ್ಯಗಳ ಸಂಗ್ರಹದೊಂದಿಗೆ ಕೊಂಕಣಿಯಲ್ಲಿ ಉಪನ್ಯಾಸ, ಭಜನೆ, ಕುಂದಾಪುರ ಪರಿಸರದಲ್ಲಿ ಹಲವಾರು ಕೊಂಕಣಿ ಹಾಗೂ ಇತರ ಸಂಘಟನೆಗಳನ್ನು  ಕಟಿ ಸಮಾಜ ಸೇವೆ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿ ಗುರುತಿಸಿ ಕೊಂಡಿರುವ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ಕಾಮತ ಅವರು ಸತತ ಕಳೆದ ಐದು ದಶಕಗಳಿಗಿಂತ ಅಧಿಕ ಸಮಯದಿಂದ ಕೊಂಕಣಿ- ಕನ್ನಡ ಭಾಷೆಗಳೆರಡಕ್ಕೂ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.

 ಅವರ ಹಲವಾರು ಕೊಂಕಣಿ ಕೃತಿಗಳು ಪ್ರಕಟಗೊಂಡಿವೆ. ಅವರು ಸಂಘ-ಸಂಸ್ಥೆಗಳನ್ನೂ ಕಟ್ಟಿ ಪ್ರತಿಭಾ ಪುರಸ್ಕಾರ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪಾರಂಪರಿಕ ಕಲೆ, ಸಂಸ್ಕೃತಿ, ಆಹಾರ, ಸಂಸ್ಕಾರ, ಸಂಸ್ಕೃತಿಗಳ ರಕ್ಷಣೆಗೆ ಸಹಕಾರಿಯಾಗುವಂತಹ ಹಲವಾರ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಹಲವಾರು ಸಮಾವೇಶ, ಗೋಷ್ಟಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ್ದಾರೆ. ನಾಡಿನ ಹಲವಾರು ಕೊಂಕಣಿ, ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನ, ಕವನಗಳು ಪ್ರಕಟಗೊಂಡಿವೆ.


 ಸರಸ್ವತಿ ಪ್ರಭಾ ಪುರಸ್ಕಾರ – 2023 ಕ್ಕೆ ಆಯ್ಕೆಯಾದ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ, ಕುಂದಾಪುರ ಇವರಿಗೆ ಸರಸ್ವತಿ ಪ್ರಭಾ ಪತ್ರಿಕೆಯ ವತಿಯಿಂದ ಶಾಲು, ಸ್ಮರಣಿಕೆ, ಹಾರ, ಸನ್ಮಾನ ಪತ್ರ, ಫಲ-ತಾಂಬೂಲ ಹಾಗೂ ರೂ. 5001/-(ರೂ. ಐದು ಸಾವಿರದ ಒಂದು) ಗಳ ನಗದು ಹಣದೊಂದಿಗೆ ಸದ್ಯದಲ್ಲಿಯೇ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕ ಆರಗೋಡು ಸುರೇಶ ಶೆಣೈಯವರು ಪ್ರಕಟಣೆಯು ಮೂಲಕ ತಿಳಿಸಿದ್ದಾರೆ. 


ಕಳೆದ 2022 ರ ಸಾಲಿನಲ್ಲಿ 25ಕ್ಕಿಂತ ಅಧಿಕ ಸಾಹಿತ್ಯ ಕೃತಿಗಳನ್ನು ಬರೆದ (ಅವುಗಳಲ್ಲಿ 6 ಕೊಂಕಣಿ ಕೃತಿಗಳು)  ಬೆಂಗಳೂರಿನ ಕೊಂಕಣಿ ಸಹಿತ ಕನ್ನಡ, ಇಂಗ್ಲೀಷ್, ಹಾಗೂ ಹಿಂದಿ ಸೇರಿ  ಚತುರ್ಭಾಷಾ ಸಾಹಿತಿ ೮೦ಕ್ಕಿಂತ ಅಧಿಕ ವಯಸ್ಸಾದ ವಯೋವೃದ್ಧ ಡಾ|| ಮೋಹನ ಜಿ. ಶೆಣೈ ಮತ್ತು ಕೊಂಕಣಿ ಸಾಹಿತ್ಯ ಹಾಗೂ ರಂಗಕಲೆಗೆ ಅಪಾರ ಸೇವೆ ಸಲ್ಲಿಸಿ, ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ 30ಕ್ಕಿಂತ ಅಧಿಕ ನಾಟಕಗಳನ್ನು ಬರೆದ 75 ವರ್ಷ ವಯಸ್ಸಿನ ಶಿರಸಿಯ  ಅನಿಲ ಪೈ ಇವರಿಗೆ, 2023ನೇ ಸಾಲಿನಲ್ಲಿ ಕೊಂಕಣಿಯ ಹೆಸರಾಂತ ಬರಹಗಾರ್ತಿ, ಕೊಂಕಣಿ ಜಾನಪದ ಸಾಹಿತ್ಯ ರಕ್ಷಕಿಯಾದ 8 ಕೊಂಕಣಿ ಕೃತಿಗಳನ್ನು ಪ್ರಕಟಿಸಿರುವ  77 ವರ್ಷ ವಯಸ್ಸಿನ ಶಿರಸಿಯ ಜಯಶ್ರೀ ನಾಯಕ ಎಕ್ಕಂಬಿ 
ಇವರಿಗೆ ಸರಸ್ವತಿ ಪ್ರಭಾ ಪುರಸ್ಕಾರವನ್ನು  ಪ್ರಧಾನ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು.

– ಆರಗೋಡು ಸುರೇಶ ಶೆಣೈ, ಸಂಪಾದಕರು