ಹೈದರಾಬಾದ್, ತೆಲಂಗಾಣ: ನ್ಯೂಜಿಲೆಂಡ್‌ನ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದ್ದಾರೆ.59 ರನ್ ನೀಡಿ 5 ವಿಕೆಟ್ ಪಡೆದರು. ಸ್ಯಾಂಟ್ನರ್ 5 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಲ್ಲದೆ, ಅವರು ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಕ್ಲಬ್‌ಗೂ ಸೇರಿಕೊಂಡಿದ್ದಾರೆ. ಇದರೊಂದಿಗೆ ಸ್ಯಾಂಟ್ನರ್ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿ ಸ್ಯಾಂಟ್ನರ್ ಹೊರ ಹೊಮ್ಮಿದ್ದಾರೆ. 59 ರನ್‌ಗಳಿಗೆ ಐದು ವಿಕೆಟ್ ಪಡೆದು ಸ್ಯಾಂಟ್ನರ್ ಮಿಂಚಿದರು.
ಬೌಲಿಂಗ್ನಲ್ಲಿ ಐದು ವಿಕೆಟ್ ಕಬಳಿಸಿದ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ನಲ್ಲೂ ಭಾರಿ ಸದ್ದು ಮಾಡಿದರು. ಕೊನೆಯ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಸ್ಯಾಂಟ್ನರ್ ಕೇವಲ 17 ಎಸೆತಗಳಲ್ಲಿ 36 ರನ್ ಗಳಿಸಿದರು. 211 ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಸ್ಯಾಂಟ್ನರ್ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಈ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತವನ್ನು ತಲುಪುವಲ್ಲಿ ಯಶಸ್ವಿಯಾಯಿತು.ವಿಶ್ವಕಪ್‌ನಲ್ಲಿ ಇಲ್ಲಿಯರವರೆಗೆ ಎಡಗೈ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್‌ಗಳು ಇಲ್ಲಿಯವರೆಗೆ 110 ಓವರ್‌ಗಳನ್ನು ಬೌಲ್ ಮಾಡಿದ್ದು, 25.39 ಸರಾಸರಿ ಮತ್ತು 28.6 ಸ್ಟ್ರೈಕ್ ರೇಟ್‌ನಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಸ್ಯಾಂಟ್ನರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ರವೀಂದ್ರ ಜಡೇಜಾ ಹಾಗೂ ಶಕೀಬ್ 3-3 ವಿಕೆಟ್ ಪಡೆದಿದ್ದಾರೆ. ಸ್ಯಾಂಟ್ನರ್ 10 ಓವರ್‌ಗಳಲ್ಲಿ 59 ರನ್ ನೀಡಿ ಐದು ವಿಕೆಟ್ ಪಡೆದರು. ಎದುರಾಳಿ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಸ್ಯಾಂಟ್ನರ್ ಅವರ ಸ್ಪಿನ್ನಿಂಗ್ ಎಸೆತಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ.
ವಿಶ್ವಕಪ್‌ನಲ್ಲಿ 5 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಪೈಕಿ 2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಬೆಂಗಳೂರಿನಲ್ಲಿ ಐರ್ಲೆಂಡ್ ವಿರುದ್ಧ 31 ರನ್‌ಗಳಿಗೆ 5 ವಿಕೆಟ್ ಪಡೆದಿದ್ದಾರೆ. ಶಕೀಬ್ ಅಲ್ ಹಸನ್ 2019 ರಲ್ಲಿ ಸೌತಾಂಪ್ಟನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 29 ರನ್‌ಗಳಿಗೆ 5 ವಿಕೆಟ್ ಪಡೆದಿದ್ದಾರೆ. ಇದಾದ ಬಳಿಕ ಸ್ಯಾಂಟ್ನರ್ ಹೈದರಾಬಾದ್‌ನಲ್ಲಿ ನೆದರ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು.
ಕಿವೀಸ್ ತಂಡ ನೀಡಿದ್ದ 323 ರನ್ ಗಳ ಗುರಿಗೆ ಉತ್ತರವಾಗಿ ನೆದರ್ಲೆಂಡ್ಸ್ ತಂಡ ಕೇವಲ 223 ರನ್‌ಗಳಿಗೆ ಸೀಮಿತವಾಯಿತು. ಸ್ಯಾಂಟ್ನರ್ ಐದು ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಮೂರು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ್ದು ಗಮನಾರ್ಹ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 322 ರನ್ ಗಳಿಸಿತು. ಕಳೆದ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದ್ದ ವಿಲ್ ಯಂಗ್ ಈ ಪಂದ್ಯದಲ್ಲಿ ಅಮೋಘ ಫಾರ್ಮ್ನಲ್ಲಿ ಕಾಣಿಸಿಕೊಂಡು 70 ರನ್ಗಳ ಬಲಿಷ್ಠ ಇನ್ನಿಂಗ್ಸ್ ಆಡಿದರು. ಆದರೆ, ರಚಿನ್ ರವೀಂದ್ರ 51 ರನ್ ಕೊಡುಗೆ ನೀಡಿದರು. ನಾಯಕ ಟಾಮ್ ಲ್ಯಾಥಮ್ ವೇಗದ ಬ್ಯಾಟಿಂಗ್ ನಡೆಸಿ 46 ಎಸೆತಗಳಲ್ಲಿ 53 ರನ್ ಗಳಿಸಿದರು. ಡ್ಯಾರಿಲ್ ಮಿಚೆಲ್ ಕೂಡ 48 ರನ್ ಗಳಿಸಿದರು.
ಏಕದಿನದಲ್ಲಿ 5 ವಿಕೆಟ್ ಪಡೆದ ನ್ಯೂಜಿಲೆಂಡ್ ಸ್ಪಿನ್ನರ್‌ಗಳ ಪೈಕಿ ಮಿಚೆಲ್ ಸ್ಯಾಂಟ್ನರ್ ಅವರು ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಎರಡು ಬಾರಿ ಐದು ವಿಕೆಟ್ ಪಡೆದಿದ್ದಾರೆ. ಆದರೆ, ಮ್ಯಾಥ್ಯೂ ಹಾರ್ಟ್ ಮತ್ತು ಇಶ್ ಸೋಧಿ ತಲಾ ಒಮ್ಮೆ ಐದು ವಿಕೆಟ್ ಕಬಳಿಸಿದ್ದಾರೆ. ಸ್ಯಾಂಟ್ನರ್ ಅವರು ವಿಶ್ವಕಪ್‌ನಲ್ಲಿಯೇ ವೆಟ್ಟೋರಿ ಅವರ ದಾಖಲೆ ಮುರಿಯಬಹುದಾಗಿದೆ. ಕಿವೀಸ್ ತಂಡ ಇನ್ನೂ 7 ಪಂದ್ಯಗಳನ್ನು ಆಡಬೇಕಿದೆ.