ಉಡುಪಿ: ರಾಜ್ಯದ ಪ್ರತಿಷ್ಟಿತ ಸಿಜಿಕೆ ರಂಗ ಪ್ರಶಸ್ತಿ- 2019 ಯುವ ನಿರ್ದೇಶಕ, ನಟ ಸಂತೋಷ್ ನಾಯಕ್ ಪಟ್ಲ ಅವರಿಗೆ ಪ್ರಧಾನ ಮಾಡಲಾಯ್ತು. ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ, ಸಂಸ ಥಿಯೇಟರ್ ಬೆಂಗಳೂರು ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿಯು ಪಟ್ಲದ ಯು.ಎಸ್ ನಾಯಕ್ ಪ್ರೌಢಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ನಾಟಕವನ್ನು ಆ ಪಂಥ ಈ ಪಂಥ ಎಂದು ವಿಂಗಡಿಸುವ ಬದಲು ನಾಟಕದ ವಸ್ತುವಿನಲ್ಲಿ ಜೀವಪರತೆ ಕಾಣಬೇಕು. ರಂಗ ನಿರ್ದೇಶಕ ರಂಗದ ಬದ್ಧತೆ ಜೊತೆಗೆ ಸಾಮಾಜಿಕ ಬದ್ಧತೆ ಇರಬೇಕು. ಗ್ರಾಮೀಣ ಭಾಗದಲ್ಲಿ ತಯಾರಾದ ನಾಟಕವನ್ನು ನಗರ ಪ್ರದೇಶದಲ್ಲಿ ಪ್ರದರ್ಶಿಶಿಸುವುದು ಮುಖ್ಯವಲ್ಲ. ಗ್ರಾಮೀಣ ಪ್ರದೇಶದಲ್ಲೇ ನಾಟಕೋತ್ಸವಗಳು ನಡೆಯಬೇಕು. ಸಂತೋಷ್ ನಾಯಕ್ ಪಟ್ಲ ಇದನ್ನು ಬದ್ಧತೆಯಿಂದ ಮಾಡುತ್ತಿದ್ದಾರೆ ಎಂದರು.
ಪ್ರಶಸ್ತಿ ಪ್ರಧಾನ ಮಾಡಿದ ಹಿರಿಯ ರಂಗಕರ್ಮಿ ಐ.ಕೆ ಬೊಳುವಾರು ಮಾತನಾಡಿದರು.
ರಂಗಭೂಮಿ ಜನ ರಂಗಭೂಮಿ ಹೇಗೆ ಆಗುವುದು ಎಂಬುದನ್ನು ಹೇಳಿಕೊಟ್ಟವರು ಸಿಜಿಕೆ. ರಂಗ ಜಾಣ್ಮೆಯ ಮೂಲಕ
ಬೀದಿನಾಟಕಗಳಿಗೆ ಹೊಸರೂಪವನ್ನೇ ಕೊಟ್ಟಿದ್ದಾರೆ. ಸಿಜಿಕೆಯ ಜೊತೆ ದುಡಿದವರು ಎಲ್ಲಾ ಜಿಲ್ಲೆಗಳಲ್ಲಿ ನಾಟಕವನ್ನು ಉಳಿಸಿ ಬೆಳೆಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಸುವರ್ಣ ನ್ಯೂಸ್ ನ ವರದಿಗಾರ ಶಶಿಧರ್ ಮಾಸ್ತಿಬೈಲು, ಪಟ್ಲ ಯು. ಎಸ್ ನಾಯಕ್ ಪ್ರೌಢಶಾಲೆಯ ಸಂಚಾಲಕ ಅಣ್ಣಯ್ಯ ನಾಯಕ್ ಪಟ್ಲ, ನಿವೃತ್ತ ಮುಖ್ಯೋಪಾಧ್ಯಾಯ ನಾಗೇಶ್ ನಾಯಕ್ ಪಟ್ಲ, ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು, ಶಿಕ್ಷಕ ಎಚ್. ಎನ್ ನಟರಾಜ್, ಉಪಸ್ಥಿತರಿದ್ದರು.
ನಮ ತುಳುವೆರ್ ಸಂಘಟನೆ ಅಧ್ಯಕ್ಷ ಸುಕುಮಾರ್ ಮೋಹನ್ ಸ್ವಾಗತಿಸಿ, ಭೂಮಿಗೀತ ಸಂಘಟನೆ ಅಧ್ಯಕ್ಷ ಸುಧೀರ್ ಕುಮಾರ್ ಪಟ್ಲ ವಂದಿಸಿದರು. ನಾಗೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.