ಮಹಿಳಾ ಸ್ವಸಹಾಯ ಸಂಘದ ಸಂಜೀವಿನಿ ಸಂತೆ ಮತ್ತು ಸಾಂಸ್ಕತಿಕ ಕಲರವ ಕಾರ್ಯಕ್ರಮ

ಉಡುಪಿ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು,ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿ.ಪಂ.ಸಿಇಓ ಪ್ರಸನ್ನ ಎಚ್.ಹೇಳಿದರು.

ಅವರು ಭಾನುವಾರ ಜಿ.ಪಂ., ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ , ಲಿಂಗತ್ವ ಆಧಾರಿತ ದೌರ್ಜನ್ಯ ವಿಮೋಚನ ಅಭಿಯಾನದ ಪ್ರಯುಕ್ತ ಬನ್ನಂಜೆಯ ಬಾಲಭವನ ಬಯಲು ರಂಗಮಂದಿರದಲ್ಲಿ ನಡೆದ ಸಂಜೀವಿನಿ ಸಂತೆ ಮತ್ತು ಸಾಂಸ್ಕತಿಕ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 86 ಸಾವಿರ ಮಂದಿ ಮಹಿಳೆಯರು ಸಂಜೀವಿನಿಯ ಸದಸ್ಯರಾಗಿದ್ದು, 155 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಿಗೆ ಮತ್ತಷ್ಟು ಸ್ಪೂರ್ತಿ ದೊರೆಯಲಿದೆ, ನಮ್ಮ ಮನೆ ಹಾಗೂ ಸುತ್ತಮುತ್ತಲು ಬೆಳೆದ ಆಹಾರೋತ್ಪನ್ನಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಹಾಗೂ ಸ್ಥಳೀಯವಾಗಿ ಉದ್ಯೋಗವಕಾಶ ಸೃಷ್ಟಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಯತ್ನಶೀಲರಾಗಬೇಕು ಎಂದರು.

ಕಾಂತಾರ ಚಲನಚಿತ್ರದ ಪೋಷಕ ನಟಿ ಮಾನಸಿ ಸುಧೀರ್ ಉದ್ಘಾಟಿಸಿ, ಸಂಜೀವಿನಿ ಜೀವ ಕೊಡುವ ನಂಬಿಕೆ ಪುರಾಣದಲ್ಲಿದೆ. ಇಲ್ಲಿನ ಸಂಜೀವಿನಿ ಯೋಜನೆ ಹಲವಾರು ಮಂದಿಗೆ ಜೀವನ ನೀಡಿದೆ. ನಮ್ಮ ಸುತ್ತಮುತ್ತಲಿನ ಆಹಾರಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಜಿ.ಪಂ.ಯೋಜನಾ ನಿರ್ದೇಶಕ ಬಾಬು ಎಂ., ಬ್ರಹ್ಮಾವರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ. ಸಂಜೀವಿನಿಯ ಸಮಾಲೋಚಕ ಕೆ.ಪಾಂಡುರಂಗ ಸ್ವಾಗತಿಸಿದರು. ಸಂಜೀವಿನಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಪ್ರಾಸ್ತಾಪಿಕವಾಗಿ ಮಾತನಾಡಿದರು. ಅವಿನಾಶ್ ವಂದಿಸಿದರು. ನವ್ಯಾ ಕಾರ್ಯಕ್ರಮ ನಿರೂಪಿಸಿದರು.

ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ್ದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.