ಸ್ಯಾಂಡಲ್​ವುಡ್​ ಸ್ಟಾರ್ ಪೊಲೀಸ್​ ವಶಕ್ಕೆ : ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ನಾಗಭೂಷಣ್ ಕಾರು ಅಪಘಾತಕ್ಕೊಳಗಾಗಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಮೃತರ ಪತಿ ಸ್ಥಿತಿ ಗಂಭೀರವಾಗಿದೆ. ಕೋಣನಕುಂಟೆ ಕ್ರಾಸ್ ದಾರಿ ಮಧ್ಯೆ ಶನಿವಾರ ರಾತ್ರಿ 9:45ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ನೇಹಿತರನ್ನು ಭೇಟಿಯಾಗಿ ಜೆ.ಪಿ ನಗರದ ತಮ್ಮ ಮನೆಗೆ ನಟ ನಾಗಭೂಷಣ್ ತೆರಳುತ್ತಿದ್ದರು. ಫುಟ್ ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದ ದಂಪತಿ ರಸ್ತೆಗಿಳಿದ ಪರಿಣಾಮ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಾಗಭೂಷಣ್ ಅವರ ಕಾರು ಅಪಘಾತಕ್ಕೊಳಗಾಗಿ, ಓರ್ವ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿದ್ಯುತ್ ಕಂಬಕ್ಕೆ ಗಾಡಿ ಡಿಕ್ಕಿ: ಕೊಣನಕುಂಟೆ ಬಳಿಯ ವಸಂತಪುರ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಆರ್.ಆರ್ ನಗರದಿಂದ ಜೆ.ಪಿ ನಗರ ಮಾರ್ಗವಾಗಿ ತೆರಳುತ್ತಿದ್ದ ವೇಳೆ ನಟನ ಕಾರು ಅಪಘಾತವಾಗಿದೆ. ರಸ್ತೆ ದಾಟುತ್ತಿದ್ದ ದಂಪತಿಗೆ ನಾಗಭೂಷಣ್ ಕಾರು ಡಿಕ್ಕಿಯಾಗಿ ನಂತರ ಫುಟ್ ಪಾತ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಗಾಡಿ ಡಿಕ್ಕಿ ಹೊಡೆದಿದೆ.ನಾಗಭೂಷಣ್ ವಿರುದ್ಧ ದೂರು: ಅಪಘಾತದಲ್ಲಿ ಪ್ರೇಮ (48) ಸಾವನ್ನಪ್ಪಿದ್ದಾರೆ. ಮೃತರ ಪತಿ ಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ. ಪ್ರೇಮ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯೇ ಕೊನೆಯುಸಿರೆಳೆದರು. ಇತ್ತ ಕೃಷ್ಣ (58) ಅವರು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ನಟ ನಾಗಭೂಷಣ್ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತರ ಪುತ್ರ ಪಾರ್ಥ ದೂರು ಸಲ್ಲಿಸಿದ್ದು, ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಮುಂದೆ ಸ್ವಇಚ್ಛಾ ಹೇಳಿಕೆ ದಾಖಲಿಸಿದ ನಟ: ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ ವಾಪಸ್ ಜೆ.ಪಿ ನಗರದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ವಸಂತಪುರ ಮುಖ್ಯರಸ್ತೆಯಲ್ಲಿರುವ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟ್​ಮೆಂಟ್ ಬಳಿ ನಿನ್ನೆ ರಾತ್ರಿ 9-45ರ ಸುಮಾರಿಗೆ ಅಪಘಾತವಾಗಿದೆ. ಈ ಬಗ್ಗೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ನಟ ನಾಗಭೂಷಣ್.

”ಅಪಾರ್ಟ್​​ಮೆಂಟ್ ಹತ್ತಿರ ಓರ್ವ ಮಹಿಳೆ ಮತ್ತು ಓರ್ವ ಪುರುಷ ಪುಟ್ ಪಾತ್ ಮೇಲಿನಿಂದ ರಸ್ತೆಗೆ ಇಳಿದರು. ಅವರು ಸಡನ್​ ರಸ್ತೆಗೆ ಇಳಿದದ್ದನ್ನು ನೋಡಿ ನನಗೆ ಗಾಬರಿಯಾಗಿ, ಡಿಕ್ಕಿ ಹೊಡೆದು ನಂತರ ಮುಂದಿರುವ ಫುಟ್ ಪಾತ್ ಮೇಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಮತ್ತು ಅಪಾರ್ಟ್​​ಮೆಂಟ್ ವಾಸಿಗಳು ಓಡಿ ಬಂದು, ರಸ್ತೆಯ ಮೇಲೆ ಬಿದ್ದಿದ್ದ ಪಾದಚಾರಿಗಳನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಗೆ ತಂದು ಕೂರಿಸಿದರು. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಪಾದಚಾರಿಗಳನ್ನು ಕೂರಿಸಿದ್ದ ಸ್ಥಳಕ್ಕೆ ಹೋಗಿ ನೋಡಿದೆ. ಮಹಿಳೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಗಾಯಗಳಾಗಿ ಮಾತಾನಾಡದ ಸ್ಥಿತಿಯಲ್ಲಿದ್ದರು. ಪುರುಷನ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ಗಾಯವಾಗಿದ್ದು, ಮಾತಾನಾಡುತ್ತಿದ್ದರು. ನಂತರ ನಾನು ಗಾಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ” – ನಟ ನಾಗಭೂಷಣ್​​.

ನಾಗಭೂಷಣ್ ಮದ್ಯ ಸೇವಿಸಿರಲಿಲ್ಲ: ಅಪಘಾತದ ಸಂದರ್ಭ ನಟ ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಾಗಭೂಷಣ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ರಾತ್ರಿಯೇ ಅವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ವಿಚಾರಣೆ ವೇಳೆ, ಸಡನ್ ಆಗಿ ದಂಪತಿ ಫುಟ್​ಪಾತ್​ನಿಂದ ಕೆಳಗಿಳಿದ ಪರಿಣಾಮ ಗಾಬರಿಯಿಂದ ಅಪಘಾತವಾಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ..

ಅಪಘಾತಕ್ಕೊಳಗಾದ ಇಬ್ಬರೂ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟ್​​ಮೆಂಟ್​​ ವಾಸಿಗಳೆಂದು ತಿಳಿಯಿತು. ಅಷ್ಟರಲ್ಲಿ ವಿಷಯ ತಿಳಿದು ಆಸ್ಪತ್ರೆಗೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ಬಂದರು. ನಾನು ಅವರೊಂದಿಗೆ ಪೊಲೀಸ್ ಠಾಣೆಗೆ ಬಂದು ಅಪಘಾತದ ಬಗ್ಗೆ ವಿವರಿಸಿದ್ದೇನೆ ಎಂದು ನಾಗಭೂಷಣ್ ತಮ್ಮ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮತ್ತೊಂದೆಡೆ ಗಾಯಾಳು ಕೃಷ್ಣ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

”ಆದರೆ ನನ್ನ ಕಾರು ಸ್ಟಾರ್ಟ್ ಆಗಲಿಲ್ಲವಾದ್ದರಿಂದ ಮತ್ತೊಂದು ಆಟೋರಿಕ್ಷಾದಲ್ಲಿ ನಾನು ಮತ್ತು ಅಲ್ಲಿದ್ದ ಜನರು ಗಾಯಾಳುಗಳನ್ನು ವಸಂತಪುರ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಿ ದಾಖಲಿಸಿದೆವು. ಆಸ್ಪತ್ರೆಯ ವೈದ್ಯರು, ಗಾಯಾಳು ಮಹಿಳೆಯನ್ನು ಪರೀಕ್ಷಿಸಿ ತಲೆಗೆ ಮತ್ತು ಮುಖಕ್ಕೆ ಹೆಚ್ಚು ಪೆಟ್ಟು ಬಿದ್ದಿದ್ದು, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದರು. ಅಷ್ಟರಲ್ಲಿ ವಿಷಯ ತಿಳಿದು ಗಾಯಾಳುಗಳ ಮಗ ಆಸ್ಪತ್ರೆಗೆ ಬಂದು ಅವರ ತಂದೆಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು” – ನಟ ನಾಗಭೂಷಣ್