ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಚಾಚಿಕೊಂಡಿರುವ ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆಹಾಕಲು ಮುಂದಾಗಿದ್ದು, ಇದೀಗ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ನ ಹಲವು ನಟ ನಟಿಯರು ತೊಡಗಿಕೊಂಡಿದ್ದಾರೆ. ಅವರು ಡ್ರಗ್ಸ್ ಮಾರಾಟಮಾಡಿಯೇ ಐಷಾರಾಮಿ ಕಾರುಗಳಲ್ಲಿ ಸುತ್ತಾಡುತ್ತಿದ್ದಾರೆ. ಪೊಲೀಸರು ನನ್ನ ಬಳಿ ಕೇಳಿದರೆ ಎಲ್ಲ ವಿಚಾರವನ್ನು ಬಹಿರಂಗಪಡಿಸುವೆ ಎಂದು ಇಂದ್ರಜಿತ್ ಟಿವಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಇದೀಗ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು, ಖಚಿತ ಮಾಹಿತಿ ನೀಡುವಂತೆ ಕೋರಿ ನೋಟಿಸ್ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಮೂರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ಚುರುಗೊಳಿಸಿದ್ದಾರೆ. ಈ ಮಧ್ಯೆ ಇಂದ್ರಜಿತ್ ಅವರಿಗೆ ಮಾಹಿತಿ ನೀಡುವಂತೆ ಕರೆದಿರುವುದು ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದೆ.