ಬ್ರಹ್ಮಾವರ: ಮರಳು ಗುತ್ತಿಗೆದಾರನೋರ್ವನನ್ನು ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಲು ವಿಫಲಯತ್ನ ನಡೆಸಿದ ಘಟನೆ ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ ಮಂದಿರದ ಬಳಿ ನಡೆದಿದೆ.
ಕಾರ್ಕಳ ಇನ್ನಾ ಗ್ರಾಮದ ಮೈಕ್ರೋ ಇನ್ ಸಮೀಪದ ಕೊರಗ ಕಾಲೊನಿ ನಿವಾಸಿ ಕೃಷ್ಣ ಕೊರಗ (38) ಎಂಬವರು ಪರಿಶಿಷ್ಟ ಜಾತಿ ಮತ್ತು ಪಂಗಡ ಕೋಟಾದಡಿಯಲ್ಲಿ ಮರಳುಗಾರಿಕೆ ನಡೆಸಲು ಪರವಾನಿಗೆ ಪಡೆದುಕೊಂಡಿದ್ದಾರೆ.
ಅದರಂತೆ ಮರಳುಗಾರಿಕೆ ನಡೆಸಲು ಬ್ರಹ್ಮಾವರ ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ ಮಂದಿರದ ಬಳಿಯಿರುವ ಉಲ್ಲಾಸ್ ಶೆಟ್ಟಿ ಎಂಬವರ ಪಟ್ಟಾಸ್ಥಳವನ್ನು ಬಾಡಿಗೆ ಪಡೆದು ಅಲ್ಲಿ ಮರಳು ಧಕ್ಕೆಯನ್ನು ನಿರ್ಮಿಸಿದ್ದಾರೆ. ಅಲ್ಲಿ ಕೃಷ್ಣ ಕೊರಗ ದೋಣಿಯನ್ನು ಕಟ್ಟುತ್ತಿರುವ ವೇಳೆ ಆರೋಪಿಗಳಾದ ಹಾರಾಡಿ ಗ್ರಾಮದ ಉದಯ ಸುವರ್ಣ, ದಯಾನಂದ ಹಾಗೂ ಸುಖಾನಂದ ಎಂಬವರು ಏಕಾಏಕಿ ನುಗ್ಗಿ ಕೃಷ್ಣ ಅವರ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ಬಳಿಕ ನೀರಿನಲ್ಲಿ ಮುಳುಗಿಸಿ ಕೃಷ್ಣ ಅವರ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೃಷ್ಣ ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.












