ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗಳಿಗೆ ನಿಷೇಧ ವಿಧಿಸಿ ಹಾಗೂ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ಆಚರಿಸುವಂತೆ ದ.ಕ. ಜಿಲ್ಲಾಡಳಿತ ಆದೇಶಿಸಿ, 144(3) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾತ್ರೆ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ ವಿಷಯದಲ್ಲಿ ಸಾರ್ವಜನಿಕರಲ್ಲಿ ನಾನಾ ರೀತಿಯ ಪ್ರಶ್ನೆ ಹಾಗೂ ಗೊಂದಲ ಮೂಡಿತ್ತು. ಇದಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹಮ್ಮಿಕೊಂಡಿರುವ ಯಕ್ಷಗಾನ, ಕೋಲ, ನೇಮ, ಪೂಜೆ, ಪುನಸ್ಕಾರಗಳು ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೋವಿಡ್ 19 ನಿಯಮಪಾಲನೆಯೊಂದಿಗೆ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.
ಬಯಲು-ಮೈದಾನ ಪ್ರದೇಶದಲ್ಲಿ ಗರಿಷ್ಠ 500 ಜನಕ್ಕಿಂತ ಜಾಸ್ತಿ ಸೇರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.