ಸಂಚಾರಿ ನಿಯಮ ಪಾಲನೆ ಪರಿಶೀಲನೆಗೆ ತಂಡ ರಚನೆ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಿಕೆ, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವಿಕೆ, ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ, ರೋಡ್‍ಕ್ರಾಸ್ ಮಾಡುವಾಗ ಪಾಲಿಸಬೇಕಾದ ನಿಯಮಗಳು ಸೇರಿದಂತೆ ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಕುರಿತಂತೆ ಪರಿಶೀಲಿಸಲು, ಎಪ್ರಿಲ್ ನಿಂದ 9 ತಿಂಗಳುಗಳ ಕಾಲ ಪರಿಶೀಲನೆಗೆ 9 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಿಂಗಳು 1 ತಂಡ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಚಾರ ಪರಿಶೀಲನೆಗೆ ರಚಿಸಲಾಗಿರುವ ತಂಡಗಳು ಸೀಟ್ ಬೆಲ್ಟ್ ಹಾಕುವುದರ ಮಹತ್ವ ತಿಳಿಸುವ ಕ್ಯಾಂಪೇನ್ ಮಾಡಬೇಕು ಮತ್ತು ಸೀಟ್ ಬೇಲ್ಟ್ ಹಾಕದೆ ಇರುವುದು ಗಮನಕ್ಕೆ ಬಂದಲ್ಲಿ ನೋಟಿಸ್ ನೀಡಬೇಕು, ಸೀಟ್ ಬೇಲ್ಟ್ ಧರಿಸುವುದು, ಹೆಲ್ಮೆಟ್ ಧರಿಸುವುದು, ಸೈಕಲ್ ಚಾಲನೆ, ಸಾರ್ವಜನಿಕ ವಾಹನಗಳ ಹೆಚ್ಚೆಚ್ಚು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು, ಅವಶ್ಯವಿರುವ ಸುರಕ್ಷಾ ಸಾಧನಗಳಾದ ಅಲ್ಕೊಮೀಟರ್ ಸ್ಪೀಡ್‍ಗನ್ಸ್, ಇಂಟರ್ ಸೆಪ್ಟರ್, ಸಿಸಿಟಿವಿ, ಕ್ಯಾಮೆರಾಸ್ ಇತರೆ ವಸ್ತುಗಳ ಅವಶ್ಯಕತೆಯನ್ನು ಪಟ್ಟಿ ಮಾಡಿ ವಾರ್ಷಿಕ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು ಹಾಗೂ ಅಂತಹ ಎಲ್ಲಾ ಸಾಧನಗಳ ಬಳಕೆಗೆ ತರಬೇತಿಗೊಂಡ ಸಿಬ್ಬಂದಿಯನ್ನು ನಿಯೋಜಿಸಿ, ಎಲ್ಲಾ ಸಾಧನಗಳು ಕಾರ್ಯೋನ್ಮುಖವಾಗಿದೆಯೇ ಎಂದು ನಿಗಾವಹಿಸಬೇಕು ಎಂದು ಹೇಳಿದರು.

ನಗರದಲ್ಲಿ ಹಲವೆಡೆಗಳಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಬಹಳಷ್ಟು ಕಡೆ ಹಾಳಾಗಿದ್ದು ಸಿಸಿಟಿವಿ ದುರಸ್ತಿ ಮಾಡುವ ಕುರಿತು ಗಮನ ಹರಿಸಬೇಕು ಮತ್ತು ಯಾವ ಇಲಾಖಾ ವತಿಯಿಂದ ಸಿಸಿಟಿವಿಯನ್ನು ಅಳವಡಿಸಲಾಗಿದೆ ಆ ಇಲಾಖೆಯವರೇ ಸಿಸಿಟಿವಿಗಳ ಸಮರ್ಪಕ ಕಾರ್ಯ ನಿರ್ವಹಣೆ ಕುರಿತು ಆಗಾಗ ಪರಿಶೀಲಿಸುತ್ತಿರಬೇಕು. ನಗರಸಭೆ ವತಿಯಿಂದ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಯಾವಾಗಲೂ ಕಾರ್ಯನಿರ್ವಸುತ್ತಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವ ಬಗ್ಗೆ ನಿಗಾವಹಿಸುವುದು ಮತ್ತು ಆಕ್ಸಿಡೆಂಟ್ ಆಗಿರುವ ಕುರಿತು ವಿವರವಾಗಿ ವಯಸ್ಸು, ಲಿಂಗ ಆಧಾರವಾಗಿ ವಿಶ್ಲೇಷಿಸಬೇಕು. ವಿವಿಧ ಶಾಲಾ ಬಸ್ಸುಗಳು ಮತ್ತು ತ್ರಿಚಕ್ರ ವಾಹನಗಳು ನಿಗದಿತ ಆಸನ ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯದಂತೆ ಶೈಕ್ಷಣಿಕ ವರ್ಷ ಆರಂಭದಲ್ಲಿ ಕ್ರಮ ವಹಿಸುವಂತೆ ತಿಳಿಸಿದರು.

ರಸ್ತೆ ಸುರಕ್ಷಾ ಸಮಿತಿಯಲ್ಲಿ ರೂ. 3 ಲಕ್ಷ ಅನುದಾನವಿದ್ದು, ಅದರಲ್ಲಿ ಬ್ಯಾರಿಕೇಡ್, ಸೂಚನಾ ಫಲಕಗಳು, ರಿಪ್ಲೇಕ್ಟರ್‍ಗಳು ಇತ್ಯಾದಿ ವಸ್ತುಗಳನ್ನು ಖರೀದಿಸಬಹುದು ಎಂದು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದರು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳು ಆಗಬೇಕಿದ್ದಲ್ಲಿ ಸೂಚಿಸಿ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಬಗ್ಗೆ ವಾರ್ಷಿಕ ಗುರಿಯನ್ನು ನಿಗದಿಪಡಿಸಿಕೊಳ್ಳುವುದು. ಇಂಟರ್ ಸೆಪ್ಟರ್ ವಾಹನಗಳ ಬಳಕೆ ಮಾಡಿಕೊಳ್ಳುವ ಮೂಲಕ ಅತೀ ವೇಗವಾಗಿ ಚಲಾಯಿಸುವ ವಾಹನಗಳ ಮೇಲೆ ನಿಗಾವಹಿಸುವುದು. ಪಡುಬಿದ್ರೆ ಜಂಕ್ಷನ್ ಬಳಿ ಡಿವೈಡರ್‍ಗಳ ನಡುವೆ ಹೆಚ್ಚು ಸ್ಥಳಾವಕಾಶ ಇಲ್ಲದಿರುವುದು ಮತ್ತು ವಾಹನಗಳು ಯೂಟರ್ನ್ ಮಾಡಲು ಬಹಳ ದೂರ ಹೋಗಬೇಕು, ಮತ್ತು 27 ಕಡೆಗಳಲ್ಲಿ ಬೀದಿ ದೀಪಗಳು ಇಲ್ಲದೆ, ಹಂಪ್ಸ್ ಇಲ್ಲದಿರುವುದರಿಂದ ಇಲ್ಲಿ ಅಪಘಾತ ಹೆಚ್ಚಾಗುತ್ತಿವೆ ಎಂದು ಉಡುಪಿ ಸಂಚಾರ ಠಾಣೆ ಪೊಲೀಸ್ ಉಪ ನಿರೀಕ್ಷಕ ನಿತ್ಯಾನಂದಗೌಡ ಹೇಳಿದರು.

ಪ್ರಸ್ತುತ ಇರುವ ಎಲ್ಲಾ ರಸ್ತೆಗಳು ಅಪಘಾತಗಳು ಘಟಿಸುವ ಆಧಾರದ ಮೇಲೆ ನಿಗದಿತ ಕಾಲಮಿತಿಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಬುಲೆನ್ಸ್‍ಗಳು ಸುಸಜ್ಜಿತವಾದ ವೈದ್ಯಕೀಯ ಪರಿಕರ ಸಿಬ್ಬಂದಿಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸಿ, ಅಪಘಾತ ವರದಿಗಳ ವಿಶ್ಲೇಷಣೆಯ ಆಧಾರದ ಮೇಲೆ  ಶೇ.10ಕ್ಕೆ ಕಡಿಮೆ ಇಲ್ಲದಂತೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ವಾರ್ಷಿಕ ಗುರಿಯನ್ನು ನಿಗದಿಪಡಿಸಿ, ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಅಪಘಾತ ನಡೆಯದಂತೆ ನಿರ್ದಿಷ್ಟ ಕ್ರಮ ಕೈಗೊಳ್ಳುವ ಬಗ್ಗೆ ಗಮನ ಹರಿಸುವುದು. ಅಪಘಾತ ಪ್ರಕರಣಗಳಿಗೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸಬೇಕು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಸದಸ್ಯೆ ನಿಶಾ ಜೇಮ್ಸ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಉಡುಪಿ ಪೊಲೀಸ್ ಉಪ ಅಧೀಕ್ಷಕ ಚಿ. ಆರ್.ಜೈಶಂಕರ್, ಕಾಪು ಪೊಲೀಸ್‍ಠಾಣೆ ಉಪ ನಿರೀಕ್ಷಕ ನವೀನ್‍ಎಸ್ ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಜಾಹ್ನವಿ ಸಿ  ಮತ್ತಿತರರು ಉಪಸ್ಥಿತರಿದ್ದರು.