ಮರವಂತೆಯಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಭರ್ಜರಿ ಸ್ವಾಗತ

ಬೈಂದೂರು: ದೇಶದೆಲ್ಲೆಡೆ ಮೇಲು-ಕೀಳು ಜಾತಿ ಪದ್ಧತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಬಲವಾದ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನ ಧ್ಯೇಯದಲ್ಲಿ ನಾವು ಬದುಕುತ್ತಿದ್ದು, ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ರಥವು ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.

ಅವರು ಮಂಗಳವಾರ ಮರವಂತೆಯಲ್ಲಿ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಮಾತನಾಡಿದರು.

ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನವನ್ನು ಅರಿತುಕೊಳ್ಳುವುದರಿಂದ ದೇಶಕ್ಕೆ ಒಳಿತಾಗುತ್ತದೆ. ಯುವ ಪೀಳಿಗೆ ಸಂವಿಧಾನದ ಬಗ್ಗೆ ಜ್ಞಾನ ಹೊಂದುವುದು ಅತೀ ಅವಶ್ಯಕ ಎಂದರು.

ಸಂವಿಧಾನವು ನಮ್ಮ ದೇಶದ ಸರ್ವೊಚ್ಛ ಕಾನೂನಾಗಿದ್ದು, ಇದರ ಅಡಿಯಲ್ಲಿ ಇತರೆ ಎಲ್ಲಾ ಕಾನೂನುಗಳು ಬರುತ್ತವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದ ಅವರು, ಸಂವಿಧಾನದ ಅಡಿಯಲ್ಲಿ ನೀಡಿರುವ ಹಕ್ಕು ಮತ್ತು
ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇ.ಓ ಭಾರತಿ, ಪಿ.ಡಿ.ಓ, ,ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರೇ ಖುದ್ದು ಡೊಳ್ಳು ಬಾರಿಸುವುದರೊಂದಿಗೆ ಜಾಥಾದಲ್ಲಿ ಪಾಲ್ಗೊಂಡರು.