ಕುಂದಾಪುರ: ಯಾರು ಸಂವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಸಂವಿಧಾನವನ್ನು ಪಾಲಿಸಬಲ್ಲರು ಕೂಡಾ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ತನ್ನ ಕೊಡುಗೆಯನ್ನು ನೀಡುವ ವ್ಯಕ್ತಿಯೇ ನಿಜವಾದ ದೇಶಪ್ರೇಮಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಪ್ರಕಾಶ್ ಖಂಡೇರಿ ಹೇಳಿದರು.
ಅವರು ಸಮುದಾಯ, ಕಾನೂನು ಸೇವಾ ಸಮಿತಿ, ಬಾರ್ ಅಸೋಸಿಯೇಷನ್ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಜೊತೆಯಾಗಿ ಹಮ್ಮಿಕೊಂಡ “ನಮ್ಮ ಸಂವಿಧಾನ- ಸಂವಿಧಾನ ಓದು” ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ ನಾಯ್ಕ್, ಬಾರ್ ಅಸೋಶಿಯೇಷನ್ ಕುಂದಾಪುರದ ಕಾರ್ಯದರ್ಶಿ ಪ್ರಮೋದ ಹಂದೆ ಉಪಸ್ಥಿತರಿದ್ದರು. ಬಾರ್ ಅಸೋಶಿಯೇಷನ್ನ ಅಧ್ಯಕ್ಷ ನಿರಂಜನ ಹೆಗ್ಡೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂದೇಶ ವಡೇರಹೋಬಳಿ ಸ್ವಾಗತಿಸಿ, ಅಶೋಕ ತೆಕ್ಕಟ್ಟೆ ವಂದಿಸಿದರು. ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಚಿಂತನ ಕೇಂದ್ರದ ನಿರ್ದೇಶಕ ರಾಜಾರಾಮ್ ತೋಳ್ಪಾಡಿ ನಮ್ಮ ಸಂವಿಧಾನ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಡಾ. ದಿನೇಶ ಹೆಗ್ಡೆ, ಪ್ರಾಧ್ಯಾಪಕರು, ಶಾರದಾ ಕಾಲೇಜು ಬಸ್ರೂರು ಇವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮುದಾಯದ ಕಲಾವಿದರು ವಾಸುದೇವ ಗಂಗೇರ ಅವರ ಮಾರ್ಗದರ್ಶನದಲ್ಲಿ ಕುವೆಂಪು ರಚಿತ ಗೀತೆಗಳನ್ನು ಹಾಡಿದರು.