ಸಮಾಜಮುಖಿ ಬದುಕಿನ ನಿರ್ಮಾಣವೇ ಶಿಕ್ಷಣದ ಉದ್ದೇಶ: ಬಿ.ಎಮ್. ಸುಕುಮಾರ

ಕುಂದಾಪುರ: ಸಮಾಜಮುಖಿ ಬದುಕಿನ ನಿರ್ಮಾಣವೇ ಶಿಕ್ಷಣದ ಉದ್ದೇಶ ಹೊರತು ಅಂಕಗಳಿಕೆ-ಉದ್ಯೋಗ ಸಂಪಾದನೆ ಅಲ್ಲ. ವಿದ್ಯಾರ್ಥಿಗಳನ್ನು ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಿಸದೆ, ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸುವಲ್ಲಿ ಶಿಕ್ಷಕ ಹಾಗೂ ವಿದ್ಯಾಸಂಸ್ಥೆಯ ಪಾತ್ರ ಅಗಾಧ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದರು.

ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಪ್ರತಿಭಾ ದಿನಾಚರಣೆ’ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮಾಜ ಪರ ಹಿತಾಸಕ್ತಿಯನ್ನು ಹುಟ್ಟು ಹಾಕುವ ಮೌಲ್ಯಯುತ ಶಿಕ್ಷಣಕ್ಕೆ ಸಮಾಜದ ಕಟ್ಟಕಡೆಯ ಮಗು ತೆರೆದುಕೊಂಡಾಗ ಆರೋಗ್ಯಕರ ಬದಲಾವಣೆ ಸಾಧ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಓಂ ಗಣೇಶ್ ಕಾಮತ್ ಮಾತನಾಡಿ, ತಾಂತ್ರಿಕತೆಯ ಮೇಲಾಟವಿರುವ ಆಧುನಿಕ ಜಗತ್ತಿನಲ್ಲಿ ಪುಸ್ತಕದ ಜ್ಞಾನಕ್ಕಿಂತ ಮಿಗಿಲಾಗಿ ಸಮಾಜದ ಆಗು-ಹೋಗುಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಪರಿಜ್ಞಾನದ ಅಗತ್ಯವಿದೆ. ವ್ಯಕ್ತಿಯೋರ್ವನ ಸಾಧನೆ ಅವನೊಳಗಿನ ಪರಿಜ್ಞಾನ, ಪ್ರಾಮಾಣಿಕತೆ ಹಾಗೂ ಪರಿಶ್ರಮವನ್ನು ಆಧರಿಸಿದೆ ಎಂದರು. ಕಾಲೇಜಿನ ಪ್ರತಿಭಾ ದಿನಾಚರಣೆಯಲ್ಲಿನ ಭಾಗವಹಿಸುವಿಕೆ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಿದ್ದು, ದೇಶ ಸುತ್ತಿ ಗಳಿಸಬಹುದಾದ ಅನುಭವ-ಜ್ಞಾನವನ್ನು ಒಂದೇ ವೇದಿಕೆ ನೀಡುವುದು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಶುಭ ಹಾರೈಸಿದರು. ವಾಣಿಜ್ಯ ಉಪನ್ಯಾಸಕಿ ವೀಣಾ ಭಟ್ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಮುಖ್ಯಸ್ಥ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕಿ ಅವಿತಾ ಕೋರಿಯಾ ತೀರ್ಪುಗಾರರನ್ನು ಪರಿಚಯಿಸಿದರು. ವಾಣಿಜ್ಯ ಉಪನ್ಯಾಸಕಿ ನಿಶಾ ಶೆಟ್ಟಿ ವಂದಿಸಿ, ಅರ್ಚನಾ ಗದ್ದೆ ನಿರೂಪಿಸಿದರು.