ಹಗಲಿರುಳೆನ್ನದೆ ಮನುಕುಲದ ಒಳಿತಿಗಾಗಿ ದುಡಿಯುತ್ತಿರುವ ಎಲ್ಲ ವೈದ್ಯರಿಗೂ ಸಲಾಂ…..

“ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೆ ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ” ಎನ್ನುವ ಶ್ಲೋಕವೊಂದಿದೆ.

ಮನುಷ್ಯನ ಶರೀರವು ವ್ಯಾಧಿಗ್ರಸ್ತವಾಗಿ ಸಾಯುವ ಸ್ಥಿತಿ ತಲುಪಿದಾಗ ಬದುಕಿಸುವವನು ಭಗವಂತ. ಸಾಕ್ಷಾತ್ ‘ಶ್ರೀಮನ್ನಾರಾಯಣನೇ ವೈದ್ಯ’ ಎಂದು ಉಲ್ಲೇಖಿಸುವ ಶ್ಲೋಕವಿದು. ಇವತ್ತು ಈ ಶ್ಲೋಕವನ್ನು ವೈದ್ಯರಿಗೆ ಅನ್ವರ್ಥವಾಗಿ ಬಳಸಲಾಗುತ್ತದೆ. ಹೇಗೆ ಶ್ರೀಮನ್ನಾರಾಯಣ ಸಾಯುವ ಸ್ಥಿತಿಯಲ್ಲಿರುವವರನ್ನು ಬದುಕಿಸುತ್ತಾನೋ, ಅದೇ ರೀತಿ ವೈದ್ಯರೂ ಕೂಡಾ ತಮ್ಮ ಜೀವದ ಹಂಗು ತೊರೆದು ರೋಗಿಗಳನ್ನು ಬದುಕಿಸುತ್ತಾರೆ ಎನ್ನುವ ಅರ್ಥದಲ್ಲಿ ಈ ಉಕ್ತಿ ಬಹುವಾಗಿ ಬಳಕೆಯಾಗುತ್ತದೆ. ಕೋವಿಡ್ ನ ಈ ಸಂಕಷ್ಟದ ಕಾಲದಲ್ಲಿ ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಕೇವಲ ಕೋವಿಡ್ ಮಾತ್ರವಲ್ಲ, ಈ ಹಿಂದೆಯೂ ಮನುಕುಲದ ವಿನಾಶಕ್ಕಾಗಿ ಬಂದಂತಹ ಪ್ಲೇಗ್, ಕಾಲರಾ, ಸಿಡುಬು ಮುಂತಾದ ಸಾಂಕ್ರಾಮಿಕದ ಕಾಲದಲ್ಲೂ ತಮ್ಮ ಜೀವದ ಹಂಗು ತೊರೆದು ವೈದ್ಯರು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಅಸಂಖ್ಯ ನಿದರ್ಶನಗಳಿವೆ.

ವೈದ್ಯರು ತಮ್ಮ ಪ್ರೀತಿ ಪಾತ್ರರನ್ನು ಬದುಕಿಸಿದಾಗ ಅವರ ಕುಟುಂಬಿಕರು ಅಥವಾ ಅವರ ಆಪ್ತರು ಕೂಡಾ “ದೇವರಂತೆ ಬಂದು ನಮ್ಮ ಬಂಧುವನ್ನು ಬದುಕಿಸಿದಿರಿ” ಎನ್ನುವ ಮಾತುಗಳನ್ನಾಡುತ್ತಾರೆ. ಹಗಲಿರಲಿ, ನಟ್ಟ ನಡುರಾತ್ರಿಯಿರಲಿ ತುರ್ತು ಸಂದರ್ಭ ಅಂತ ಬಂದಾಗ, ತಮ್ಮ ವೈಯಕ್ತಿಕ ಬದುಕನ್ನು ಕೂಡಾ ಲೆಕ್ಕಿಸದೆ ಕರ್ತವ್ಯದ ಕರೆಗೆ ಓಗೊಟ್ಟು ರೋಗಿ ಇದ್ದೆಡೆಗೆ ವೈದ್ಯರು ಧಾವಿಸುತ್ತಾರೆ. ದಿನವೊಂದಕ್ಕೆ ಒಂದಲ್ಲ, ಎರಡಲ್ಲ, ಸಾವಿರಾರು ರೋಗಿಗಳನ್ನು ಕಂಡು, ಅವರಿಗೆ ಔಷಧಿ ನೀಡಿ ಜೊತೆಗೊಂದಿಷ್ಟು ಧೈರ್ಯ ತುಂಬಿ ರೋಗಿಗಳನ್ನು ಬೀಳ್ಕೊಡುವ ಬಹುತೇಕ ವೈದ್ಯರಿಗೆ ತಮ್ಮದೇ ಆದ ಬದುಕೊಂದಿದೆ, ತಮ್ಮ ಮನೆಯಲ್ಲೂ ಬರುವಿಕೆಗಾಗಿ ಕಾಯುವ ಜೀವಗಳಿರುತ್ತವೆ ಎನ್ನುವುದು ಮರೆತು ಹೋಗಿರುತ್ತದೆ.

ವಿಶ್ವಯುದ್ದಗಳ ರಣಾಂಗಣವಿರಲಿ, ಗಡಿಪ್ರದೇಶಗಳಲ್ಲಿ ದೇಶ ಕಾಯುವ ಸೈನಿಕರ ಸೇವೆಯಿರಲಿ, ಬಿಸಿಲು ಮಳೆ ಗಾಳಿ ಛಳಿ ಎನ್ನದೆ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಕರ್ತವ್ಯ ನಿರತರಾಗಿದ್ದು, ದೇಶ ಸೇವೆ ಮಾಡುವವರ ಶುಶ್ರೂಷೆ ಮಾಡುವುದೂ ದೇಶ ಸೇವೆಯ ಒಂದು ಭಾಗವೆ. ಮಾತನಾಡಬಲ್ಲ ಮನುಜ ಮಾತಿನ ಮೂಲಕ ತನ್ನ ನೋವನ್ನು ಹೇಳಿಕೊಳ್ಳಬಲ್ಲ, ಆದರೆ ಮಾತೇ ಬರದ ಮೂಕ ಪ್ರಾಣಿಗಳ ನೋವನ್ನು ಅರಿತು ಅವುಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಪಶು ವೈದ್ಯರು, ಅವರ ತಾಳ್ಮೆ, ಪ್ರಾಣಿಗಳ ಸೇವೆಯಲ್ಲಿ ಧನ್ಯತೆ ಕಾಣುವ ಅವರ ಭಾವ ಕೂಡಾ ಪ್ರಶಂಸೆಗೆ ಅರ್ಹವಾದದ್ದೆ. ವೈದ್ಯಕೀಯ ಎನ್ನುವುದು ವೃತ್ತಿ ಕ್ಷೇತ್ರವಲ್ಲ, ಅದು ಸೇವಾ ಕ್ಷೇತ್ರ. ಸೇವೆಯಲ್ಲಿಯೇ ಧನ್ಯತೆ ಕಾಣುವ ಮನೋಭಾವ ಎಲ್ಲರಿಗೂ ಬರುವಂತಹುದಲ್ಲ.

ವೈದ್ಯರು ನೀಡುವ ಮದ್ದು-ಮಾತ್ರೆಗಳಿಂದ ರೋಗಿ ಗುಣಮುಖನಾಗುತ್ತನೋ ಇಲ್ಲವೋ ಅದು ಬೇರೆ ವಿಷಯ. ಆದರೆ “ಏನೂ ಆಗಲ್ಲ, ಚಿಂತಿಸಬೇಡಿ.. ನೀವು ಖಂಡಿತ ಗುಣಮುಖರಾಗುತ್ತೀರಿ.. ಧೈರ್ಯದಿಂದಿರಿ” ಎಂದು ವೈದ್ಯರಾಡುವ ಧನಾತ್ಮಕ ಮಾತುಗಳಿಂದ ರೋಗಿಯ ಮನೋಸ್ಥೆರ್ಯ ಧೃಡವಾಗುವುದಂತೂ ದಿಟ. ಎಷ್ಟೋ ಬಾರಿ ಮದ್ದು ಮಾಡದ ಕೆಲಸವನ್ನು ವೈದ್ಯರ ಧೈರ್ಯ ತುಂಬಿದ ಮಾತುಗಳೇ ಮಾಡಿರುತ್ತವೆ! ನಮ್ಮಲ್ಲಿ ಎಷ್ಟೋ ಜನರಿಗೆ ವೈದ್ಯರೂ ಕೂಡಾ ಮನುಷ್ಯರೇ, ಅವರಿಗೂ ಇತಿ ಮಿತಿಗಳಿವೆ, ಅವರಿಗೂ ಅವರದೇ ಆದ ಬದುಕು ಆಸೆ ಆಕಾಂಕ್ಷೆ ಅಥವಾ ಪ್ರತಿಭೆಗಳಿರುತ್ತವೆ ಎನ್ನುವುದು ಮರೆತೇ ಹೋಗುತ್ತದೆ. ಎಲ್ಲೋ ಯಾರೊ ಮಾಡಿದ ಒಂದು ತಪ್ಪಿಗೆ ಇಡೀ ವೈದ್ಯರ ಕುಲವೇ ಕಳಂಕಿತರಾಗುವ ಸಂದರ್ಭ ಬರುತ್ತದೆ. ಆದರೆ ನಮ್ಮ ಮನೆಯ ಸದಸ್ಯ ತೀರಾ ಅಸ್ವಸ್ಥನಾದಾಗ ಮತ್ತದೇ ವೈದ್ಯರ ನೆನಪಾಗುತ್ತದೆ. ಯಾರೂ ಕೂಡಾ ತಮ್ಮ ತಂದೆ ತಾಯಿ, ಸಂಗಾತಿ ಅಥವಾ ಮಕ್ಕಳು ಸತ್ತರೆ ಸಾಯಲಿ ಎನ್ನುವುದಿಲ್ಲ, ಬದಲಿಗೆ ವೈದರಲ್ಲಿಗೆ ಕರೆದುಕೊಂಡು ಹೋಗಿ, ಡಾಕ್ಟ್ರೇ ದಯವಿಟ್ಟು ನಮ್ಮವರನ್ನು ಬದುಕಿಸಿ ಕೊಡಿ ಎಂದೇ ಹೇಳುತ್ತಾರೆ.


ತಮ್ಮ ಬಳಿ ಬಂದ ರೋಗಿಗಳನ್ನು ಬದುಕಿಸುವ ಸರ್ವ ಪ್ರಯತ್ನವನ್ನೂ ವೈದ್ಯರು ಮಾಡುತ್ತಾರೆ. ಆದರೆ ಒಬ್ಬ ವ್ಯಕ್ತಿಯ ವಿಧಿ ಲಿಖಿತವನ್ನು ಅಥವಾ ಆತನ ಸಾವನ್ನು ತಿದ್ದಲು ವೈದ್ಯರಿಗೂ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ದೇವರೇ ಕಾಪಾಡಬೇಕು, ಅದಕ್ಕೆ ಹರಿಯೇ ವೈದ್ಯ ಎನ್ನುವುದು. ಇಷ್ಟಕ್ಕೂ ವೈದ್ಯರೂ ಕೂಡಾ “ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ, ಮಿಕ್ಕಿದ್ದು ದೈವೇಚ್ಛೆ” ಎಂದು ಹೇಳುತ್ತಾರೆ. ಅಂದರೆ ದೈವ ಮಾಡಿದ ನಿಯಮವನ್ನು ಮೀರುವುದು ಸಾಧ್ಯವಿಲ್ಲ ಎನ್ನುವುದು ವೈದರಿಗೂ ಗೊತ್ತು, ಅದನ್ನು ಅರಿವಳಿಕೆ ಮಾಡುವ ಪ್ರಯತ್ನವನ್ನೂ ಅವರು ಮಾಡುತ್ತಾರೆ.

ಸಾಕ್ಷಾತ್ ದೇವರಲ್ಲದಿದ್ದರೂ ದೇವರಿಗಿಂತ ಕಡಿಮೇಯೆನ್ನಲ್ಲ ನಮ್ಮ ವೈದ್ಯರು. ಹಗಲು ರಾತ್ರಿ ಎನ್ನದೆ ಮನುಕುಲದ ಒಳಿತಿಗಾಗಿ ದುಡಿಯುತ್ತಿರುವ ಎಲ್ಲ ವೈದ್ಯರಿಗೂ ಒಂದು ಸಲಾಂ… ವೈದ್ಯರ ದಿನದ ಶುಭಾಶಯಗಳು…

– ಶರೋನ್ ಶೆಟ್ಟಿ ಐಕಳ