ಉಡುಪಿ: ಮೇ 18ರಿಂದ ಜಿಲ್ಲೆಯಾದ್ಯಂತ ಎಲ್ಲಾ ಸೆಲೂನ್ (ಕ್ಷೌರಿಕ ಅಂಗಡಿ)ಗಳನ್ನು ತೆರೆಯಲು ಜಿಲ್ಲಾಧಿಕಾರಿ ಷರತ್ತು ಬದ್ಧ ಅನುಮತಿ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 53 ದಿನಗಳಿಂದ ಸೆಲೂನ್ ಗಳು ಸ್ಥಗಿತಗೊಂಡಿದ್ದು, ಇದರಿಂದ ಕ್ಷೌರಿಕರು ಯಾವುದೇ ಸಂಪಾದನೆ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳ ನಿಯೋಗವು ಮೇ 13 ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕ್ಷೌರಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಮನವರಿಕೆ ಮಾಡಲಾಗಿತ್ತು. ಅಲ್ಲದೆ, ಮೇ 18 ರಿಂದ ಸೆಲೂನ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಷರತ್ತು ಬದ್ಧ ಅನುಮತಿ ನೀಡಿದ್ದಾರೆ ಎಂದು ಹೇಳಿದರು.
ಗ್ರಾಹಕರು, ಕ್ಷೌರಿಕರು ಪಾಲಿಸಬೇಕಾದ ನಿಯಮಗಳು:
ಗ್ರಾಹಕರು ಪೋನ್ ಮೂಲಕ ಸಮಯ ನಿಗದಿ ಮಾಡಿ ಕ್ಷೌರ ಮಾಡಲು ಬರುವುದು ಉತ್ತಮ.
ಸೆಲೂನ್ ಗಳು ಹವಾನಿಯಂತ್ರಣ(ಎಸಿ)ದಲ್ಲಿ ಇರಬಾರದು. ಗ್ರಾಹಕರು ಮತ್ತು ಕ್ಷೌರಿಕರ ನಡುವೆ ಕನಿಷ್ಠ ಎರಡು ಫೀಟ್ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಒಬ್ಬರಿಗೆ ಬಳಸುವ ಬಟ್ಟೆಯನ್ನು ಮತ್ತೊಬ್ಬ ಗ್ರಾಹಕನಿಗೆ ಬಳಸಬಾರದು. ಅದನ್ನು ಒಗೆದ ನಂತರವೇ ಮತ್ತೊಬ್ಬರಿಗೆ ಬಳಸಬೇಕು. ಗ್ರಾಹಕರಿಗೆ ಸೇವೆ ನೀಡುವಾಗ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಹಾಕಬೇಕು. ಗ್ರಾಹಕರಿಗೆ ಸ್ಯಾನಿಟೈಸರ್ ನಲ್ಲಿ ಕೈ ತೊಳೆಯಲು ತಿಳಿಸಬೇಕು. ಕ್ಷೌರ ಮಾಡಿದ ಬಳಿಕ ಕ್ಷೌರಿಕರು ಸಾಬೂನ್ ನಲ್ಲಿ ಕೈ ತೊಳೆಯಬೇಕು. ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು ಮತ್ತು ಕುರ್ಚಿಗಳ ನಡುವೆ ಒಂದು ಮೀಟರ್ ಅಂತರ ಇರಬೇಕು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಆದಿಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲ್ಲೂಕು ಸಂಘದ ಅಧ್ಯಕ್ಷ ರಾಜು ಸಿ. ಭಂಡಾರಿ ಇದ್ದರು.