ಮಹಿಳೆಯೊಬ್ಬರು ತಾನು ಹೇಳಿದ್ದಕ್ಕಿಂತ ಹೆಚ್ಚು ಉದ್ದ ಕೂದಲು ಕತ್ತರಿಸಿದ ಸಲೂನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ, 2 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದು, ಕಡೆಗೂ ಆಕೆ ಅದರಲ್ಲಿ 25 ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡೆಲ್ ಆಶ್ನಾ ರಾಯ್ ಎಂಬುವವರೇ ಹೀಗೆ ಕೇಸ್ ಹಾಕಿ 25 ಲಕ್ಷ ರೂಪಾಯಿ ಪರಿಹಾರ ಪಡೆದವರು.
ಏನಿದು ಘಟನೆ:
2018ರ ಪ್ರಕರಣ ಇದಾಗಿದ್ದು, 2018ರ ಏಪ್ರಿಲ್‌ನಲ್ಲಿ ಐಐಎಂ ಕಲ್ಕತ್ತಾ ಸ್ನಾತಕೋತ್ತರ ಪದವೀಧರೆಯಾದ ಮಾಡೆಲ್ ಆಶ್ನಾ ರಾಯ್ ಎಂಬುವವರು, ತಮ್ಮ ಕೆಲಸದ ಸಂದರ್ಶನಕ್ಕೆ ಮುಂಚಿತವಾಗಿ ದೆಹಲಿಯ ಐಟಿಸಿ ಮೌರ್ಯದಲ್ಲಿ ಇರುವ ಸಲೂನ್‌ಗೆ ಹೇರ್ ಕಟ್ ಮಾಡಲು ಹೋಗಿದ್ದರು. ಅವರು ತಮ್ಮ ಕೂದಲನ್ನು 4 ಇಂಚಿನಷ್ಟು ಟ್ರಿಮ್ ಮಾಡುವಂತೆ ಅಲ್ಲಿನ ಸಲೂನ್ ಸಿಬ್ಬಂದಿಗೆ ಹೇಳಿದ್ದರು. ಆದರೆ ಸಲೂನ್ ಸಿಬ್ಬಂದಿ ಅವರು ನಿರೀಕ್ಷಿಸಿದಕ್ಕಿಂತ ಹೆಚ್ಚು ಉದ್ದ ಕೂದಲನ್ನು ಕತ್ತರಿಸಿದ್ದರು.

ಇದಕ್ಕೆ ಪೂರಕವಾಗಿ ಸಲೂನ್ ಸಿಬ್ಬಂದಿ ಅವರಿಗೆ ಉಚಿತ ಹೇರ್‌ಕೇರ್ ಆಫರ್ ಮಾಡಿತ್ತು. ಆದರೆ ಈ ಉಚಿತ ಹೇರ್ ಕೇರ್ ತನ್ನ ನೆತ್ತಿ ಹಾಗೂ ಕೂದಲಿನ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಜುಲೈ 2018ರಲ್ಲಿ ಮಾಡೆಲ್ ರಾಯ್ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ದೂರು ಸಲ್ಲಿಸಿದ್ದಾರೆ.
ಉದ್ಯೋಗ ಸಂದರ್ಶನಗಳು ಮತ್ತು ಮಾಡೆಲಿಂಗ್ ಅವಕಾಶಗಳಿಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಐಟಿಸಿ ಮೌರ್ಯದ ಸಲೂನ್‌ನವರು ನಡೆಸಿದ ಕೆಟ್ಟ ಕ್ಷೌರವು ನನ್ನ ಆತ್ಮವಿಶ್ವಾಸ ಮತ್ತು ವೃತ್ತಿಪರ ಇಮೇಜ್ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ದೂರಿನದಲ್ಲಿ ತಿಳಿಸಿದ್ದರು. ಈ ಘಟನೆಯಿಂದ ತಾನು ಗಂಭೀರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ರೂ. 3 ಕೋಟಿ ಪರಿಹಾರ ಸಿಗಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು.
















