ಸಾಲಿಗ್ರಾಮ ಪ.ಪಂ ವಿವಿಧ ಯೋಜನೆ- ಅರ್ಜಿ ಆಹ್ವಾನ

ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಜನರಿಗೆ, ಇತರೆ ಬಡ ವರ್ಗದವರಿಗೆ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಎಸ್.ಎಫ್.ಸಿ ನಿಧಿ ಮತ್ತು ಪಟ್ಟಣ ಪಂಚಾಯತ್ ನಿಧಿಯಿಂದ ಅನುದಾನ ಕಾಯ್ದಿರಿಸಿ, ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಪರಿಶಿಷ್ಟ ಜಾತಿ, ಪಂಗಡದವರಿಗೆ ವಿದ್ಯಾರ್ಥಿ ವೇತನ (ಎಸ್‍ಎಸ್‍ಎಲ್‍ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ), ಅಡುಗೆ ಅನಿಲ ಸಂಪರ್ಕ, ಶೌಚಾಲಯ, ವೈದ್ಯಕೀಯ ಚಿಕಿತ್ಸೆ, ಸ್ವಯಂ ಉದ್ಯೋಗಕ್ಕಾಗಿ ಸಹಾಯಧನಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇತರೆ ಬಡ ವರ್ಗದವರಿಗೆ ಶೌಚಾಲಯ, ಅನಿಲ ಸಂಪರ್ಕಕ್ಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ವಿಕಲಚೇತನರಿಗೆ ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ, ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

    ವಿದ್ಯಾರ್ಥಿವೇತನಕ್ಕೆ ವಾರ್ಷಿಕ ಆದಾಯ 2.50 ಲಕ್ಷ ರೂ. ಹಾಗೂ ಇತರೆ ಯೋಜನೆಗಳಿಗೆ 3 ಲಕ್ಷ ರೂ. ಮೀರಿರಬಾರದು. ಅರ್ಹ ಅಭ್ಯರ್ಥಿಗಳು ರೇಷನ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ ಪ್ರತಿ, 2019-20 ನೇ ಸಾಲಿನ ಮನೆ ತೆರಿಗೆ ಪಾವತಿ ಪ್ರತಿ, ಜಾತಿ/ ಆದಾಯ ಪ್ರಮಾಣ ಪತ್ರ, ಪೋಟೋ, ಆಧಾರ್ ಕಾರ್ಡ್ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

    ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ವರ್ಷದ ಅಂಕಪಟ್ಟಿ ಪ್ರತಿ ಹಾಗೂ ಪ್ರಸಕ್ತ ಸಾಲಿನ ವ್ಯಾಸಾಂಗ ದೃಢೀಕರಣ ಪತ್ರವನ್ನು ಮೇಲೆ ತಿಳಿಸಿರುವ ದಾಖಲೆಗಳೊಂದಿಗೆ ಸಲ್ಲಿಸಬೇಕು. ವಿಕಲಚೇತನರು, ವಿಕಲಚೇತನ ದೃಢೀಕರಣ ಪತ್ರದ ಪ್ರತಿಯನ್ನು ಮೇಲೆ ತಿಳಿಸಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.