ಆನ್‌ಲೈನ್‌ನಲ್ಲಿ ವಿಷಕಾರಿ ದತ್ತೂರಿ ಬೀಜ ಮಾರಾಟ: ಇ-ಕಾಮರ್ಸ್‌ಗಳಿಗೆ FDA ನೋಟಿಸ್

ಬೆಂಗಳೂರು: ಪ್ರಾಣಕ್ಕೆ ಅಪಾಯ ಉಂಟುಮಾಡುವ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಆನ್‌ಲೈನ್‌ ಇ-ಕಾಮರ್ಸ್‌ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿರುವುದು ಆಹಾರ ಮತ್ತು ಔಷಧ ಆಡಳಿತ (FDA)ದ ಗಮನಕ್ಕೆ ಬಂದಿದೆ. ಅಮೆಜಾನ್ ಸೇರಿದಂತೆ ಹಲವು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಗತ್ಯ ಅನುಮತಿ ಇಲ್ಲದೆ ದತ್ತೂರಿ ಹಣ್ಣು ಹಾಗೂ ಬೀಜಗಳ ಮಾರಾಟ ನಡೆಯುತ್ತಿರುವ ಆರೋಪ ಕೇಳಿಬಂದಿದೆ.

ದತ್ತೂರಿ ಹಣ್ಣು ಮತ್ತು ಬೀಜಗಳು ವಿಷಕಾರಿ ಗುಣ ಹೊಂದಿದ್ದು, ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಅಪಾಯಕಾರಿ ಉತ್ಪನ್ನಗಳ ಆನ್‌ಲೈನ್‌ ಮಾರಾಟದ ಬಗ್ಗೆ FDA ಗಂಭೀರವಾಗಿ ಪರಿಗಣಿಸಿದೆ.

ಇ-ಕಾಮರ್ಸ್‌ ಕಂಪನಿಗಳಿಗೆ ನೋಟಿಸ್

ಅನುಮತಿ ಇಲ್ಲದೆ ದತ್ತೂರಿ ಸೇರಿದಂತೆ ಅಪಾಯಕಾರಿ ಬೀಜಗಳನ್ನು ಮಾರಾಟ ಮಾಡುತ್ತಿರುವ ಕುರಿತು ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ FDA ನೋಟಿಸ್‌ ನೀಡಿದೆ. ಅಪಾಯಕಾರಿ ಬೀಜಗಳ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಲಾಗಿದೆ.

ಇತ್ತೀಚೆಗೆ ರಾಜ್ಯದ ವಿವಿಧೆಡೆ ನಕಲಿ ಹಾಗೂ ಅಸುರಕ್ಷಿತ ಆಹಾರ ಉತ್ಪನ್ನಗಳ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಡುಪಿಯಲ್ಲೂ ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸುವ ಪ್ರಕರಣ ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಂಡಿದ್ದರು.

FDA ಮುಂದೆ ಹಾಜರಾದ ಅಮೆಜಾನ್ ಪ್ರತಿನಿಧಿಗಳು

FDA ಆಯುಕ್ತರ ನೋಟಿಸ್‌ ಹಿನ್ನೆಲೆಯಲ್ಲಿ ಅಮೆಜಾನ್ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆನ್‌ಲೈನ್‌ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ಆದರೆ, ಅಮೆಜಾನ್ ಪ್ರತಿನಿಧಿಗಳು ಈ ಕುರಿತು ಸ್ಪಷ್ಟ ಉತ್ತರ ನೀಡದೆ, ಪ್ರತಿಕ್ರಿಯೆ ನೀಡಲು ಸಮಯಾವಕಾಶ ಕೋರಿದ್ದಾರೆ ಎನ್ನಲಾಗಿದೆ.

ಅಪಾಯಕಾರಿ ದತ್ತೂರಿ ಬೀಜಗಳ ಆನ್‌ಲೈನ್‌ ಮಾರಾಟವನ್ನು ತಡೆಯಲು FDA ಮುಂದಿನ ಕ್ರಮ ಕೈಗೊಳ್ಳುತ್ತಿದ್ದು, ಇತರೆ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೇಲೂ ತನಿಖೆ ಮುಂದುವರಿಸುವ ಸಾಧ್ಯತೆ ಇದೆ.