ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ಬೆಂಗಳೂರು ನಗರದ ಕ್ರಿಸ್ತು ಜಯಂತಿ ಪರಿಗಣಿತ ವಿಶ್ವವಿದ್ಯಾಲಯವು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಆಗಸ್ಟಿನ್ ಜಾರ್ಜ್ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಫಾ. ಜೋಶಿ ಮ್ಯಾಥ್ಯೂ ಭಾಗವಹಿಸಿದ್ದರು.
ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜನಗೇರಿ, ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗ್ಡೆ ಹಾಗೂ ಎಂಬಿಎ. ನಿರ್ದೇಶಕರಾದ ಡಾ.ವಿಶಾಲ್ ಸಮರ್ಥ ಅವರು ಉಪಸ್ಥಿತರಿದ್ದರು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಂಜುನಾಥ ಭಂಡಾರಿ ಅವರು ಎ. 2026ರಲ್ಲಿ ಕ್ರಿಸ್ತು ಜಯಂತಿ ವಿಶ್ವ ವಿದ್ಯಾನಿಲಯಕ್ಕೆ ನೀಡಿದ ತಮ್ಮ ಭೇಟಿಯನ್ನು ಸ್ಮರಿಸಿ, ಅಲ್ಲಿನ ಶೈಕ್ಷಣಿಕ ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶಂಸಿಸಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡಿರುವ ಬಿಬಿಎ, ಬಿಸಿಎ ಮತ್ತು ಎಂಸಿಎ ಕೋರ್ಸ್ ಗಳ ಅಭಿವೃದ್ಧಿಗೆ ಕ್ರಿಸ್ತು ಜಯಂತಿಯಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಪರಿಚಯಾತ್ಮಕ ವಿಡಿಯೋ ಪ್ರದರ್ಶನದ ನಂತರ ಕುಲಪತಿ ರೆ.ಫಾ ಡಾ. ಆಗಸ್ಟಿನ್ ಜಾರ್ಜ್ ಅವರು ಮುಖ್ಯ ಭಾಷಣ ಮಾಡಿದರು. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಸಿಎಚ್ಆರ್ಒ ರೆ. ಫಾ. ಜೋಶಿ ಮ್ಯಾಥ್ಯೂ ,ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜನಗೇರಿ ಅವರು ಮಾತನಾಡಿದರು. ಡಾ. ವಿಶಾಲ್ ಸಮರ್ಥ ಸ್ವಾಗತಿಸಿ, ಡಾ. ಸುಷ್ಮಾ ವಿ. ನಿರೂಪಿಸಿದರು.

















