ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದದ್ದು: ಎಂ.ಎನ್‌. ರಾಜೇಂದ್ರ ಕುಮಾರ್

ಉಡುಪಿ: ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದ್ದು, ಸದೃಢ ಆರ್ಥಿಕ ಸಮಾಜ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಮಹಿಳೆಯರು ಇನ್ನಷ್ಟು ಪರಿಣಾಮಕಾರಿಯಾಗಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.
66ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಉಡುಪಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರ ಸಂಘ, ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ವಿವಿಧ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯುವಜನ, ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು’ ಎಂಬ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸಾಧಿಸುವ ಮನೋಬಲವನ್ನು ರೂಢಿಸಿಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಮೀಸಲಾತಿಗಾಗಿ ಕಾಯಬಾರದು. ನಾವು ಪುರುಷರಷ್ಟೇ ಸಮಾನರು ಎಂಬುವುದನ್ನು ತಿಳಿದುಕೊಳ್ಳಬೇಕು. ಯಾವುದೇ ಜವಾಬ್ದಾರಿ ಹಾಗೂ ಕ್ಲಿಷ್ಟಕರ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಮಹಿಳಾ ಸಹಕಾರ ಅತ್ಯಗತ್ಯ ಎಂದರು. ಉಡುಪಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ
ಲವಿಟಾ ಅಂದ್ರಾದೆ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌, ಮಹಿಳಾ ಗ್ರಾಹಕರ‌ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಪ್ರೇಮಾ ಸುರೇಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್‌ ಕುಮಾರ್‌ ಶೆಟ್ಟಿ, ಬೆಳಪು ದೇವಿ ಪ್ರಸಾದ್‌ ಶೆಟ್ಟಿ, ಸಹಕಾರಿ ಯೂನಿಯನ್‌ ನಿರ್ದೇಶಕರಾದ ಕೊರಗ ಪೂಜಾರಿ, ಹರೀಶ್‌ ಕಿಣಿ ಅಲೆವೂರು, ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಉಮಾ ಆರ್. ಹೆಗ್ಡೆ, ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ರಮಾದೇವಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಪ್ರಮುಖರಾದ ಸುರೇಶ್‌ ರಾವ್‌, ಶೋಭಾ ಪೂಜಾರಿ, ಮನೋಜ್‌ ಕರ್ಕೇರ ಉಪಸ್ಥಿತರಿದ್ದರು. ಉಪನ್ಯಾಸಕಿ‌ ಬಿಂದು ಬಿ. ನಾಯರ್‌ ದಿಕ್ಸೂಚಿ ಭಾಷಣ ಮಾಡಿದರು.