ಉಡುಪಿ: ಸಹಕಾರ ಭಾರತಿ ಉಡುಪಿ ಜಿಲ್ಲೆಯ ಜಿಲ್ಲಾ ಕಾರ್ಯಕಾರಿಣಿ ಸಭೆ ಜಿಲ್ಲಾ ಅಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕಿನ್ನಿಮುಲ್ಕಿಯ ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
ಸಹಕಾರ ಭಾರತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಮಾತನಾಡಿ, ಡಿಜಿಟಲ್ ಸದಸ್ಯತಾ ಅಭಿಯಾನ , ಹೊಸದಾಗಿ ಸದಸ್ಯರಾಗುವವರಿಗೆ ತಾಲೂಕು ಮಟ್ಟಗಳಲ್ಲಿ ಸಹಕಾರ ಭಾರತಿ ಪರಿಚಯ ವರ್ಗಗಳ ಆಯೋಜನೆ ಹಾಗೂ ಸಹಕಾರ ಭಾರತಿ ಚಟುವಟಿಕೆಗಳನ್ನು ಗ್ರಾಮ ಮಟ್ಟದ ಸಹಕಾರಿ ಸಂಸ್ಥೆಗಳ ವರೆಗೆ ವಿಸ್ತರಿಸುವ ಕುರಿತು ಮಾಹಿತಿ ನೀಡಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ವಿಶೇಷವಾಗಿ ಮತದಾರರ ಪಟ್ಟಿ, ವಿಶೇಷ ಪರಿಷ್ಕರಣೆ (SIR – Special Intensive Revision) ಕುರಿತು ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಸಾಮಾನ್ಯ ಸದಸ್ಯರಿಗೆ ಸಮರ್ಪಕ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಸಹಕಾರ ಭಾರತಿ ಸಂಘಟನೆಯ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸುವ ಕುರಿತು ಚರ್ಚಿಸಿ, ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಮಟ್ಟದ ಸಹಕಾರ ಭಾರತಿ ಕಾರ್ಯಕಾರಿಣಿ ಸಭೆಯನ್ನು ಪ್ರತಿ ತಿಂಗಳು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ನಡೆಸುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಜು.28 ಮೈಸೂರು ವಿಭಾಗದ ಕಾರ್ಯಕಾರಣಿ ಸಭೆ:
ಇದೇ ವೇಳೆ ಮೈಸೂರು ವಿಭಾಗದ ಕಾರ್ಯಕಾರಣಿ ಸಭೆಯ ಆತಿಥ್ಯವನ್ನು ಈ ಬಾರಿ ಉಡುಪಿ ಜಿಲ್ಲಾ ಸಹಕಾರ ಭಾರತಿ ವಹಿಸುವುದೆಂದು ತೀರ್ಮಾನಿಸಿ, ಜುಲೈ 28, 2026ರಂದು ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಯೋಜಿಸಲಾಗುವುದು ಎಂದು ನಿರ್ಧರಿಸಲಾಯಿತು.
ಸಭೆಯಲ್ಲಿ ಉಡುಪಿ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಇಒ ರಾಜೇಶ್ ಹೆಗ್ಡೆ, ಜಿಲ್ಲಾ ಮಹಿಳಾ ಪ್ರಮುಖರಾದ ಆಶಾ ಹೆಗ್ಡೆ, ಜಿಲ್ಲಾ ಕೋಶಾಧಿಕಾರಿ ಪ್ರಸಾದ ಶೆಟ್ಟಿ ಕುತ್ಯಾರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜೇತ್ ನಾಯಕ್ ವಿವಿಧ ತಾಲೂಕು ಅಧ್ಯಕ್ಷರುಗಳಾದ ನೀರೆ ರವೀಂದ್ರ ನಾಯಕ, ಜಗನ್ನಾಥ್ ಕೋಟೆ, ಗಣೇಶ್ ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು, ತಾಲೂಕು ಕಾರ್ಯದರ್ಶಿಗಳು ಹಾಗೂ ವಿವಿಧ ಹಂತದ ಸಂಘಟನಾ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ನಾಯಕ್ ವಂದಿಸಿದರು.















