ಉಡುಪಿ: ಸಹಬಾಳ್ವೆ ಉಡುಪಿ ಇದರ ಆಶ್ರಯದಲ್ಲಿ ಇದೇ 17ರಂದು ಕಲ್ಸಂಕ ರಾಯಲ್ಸ್ ಗಾರ್ಡನ್ನಲ್ಲಿ
‘ಸರ್ವಜನೋತ್ಸವ’ ಸಮಾವೇಶ ನಡೆಯಲಿದೆ ಎಂದು ಸಹಬಾಳ್ವೆಯ ಸಂಚಾಲಕ ಅಮೃತ್ ಶೆಣೈ ಹೇಳಿದರು.
ಸಹಬಾಳ್ವೆಯ ಉಡುಪಿ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಎತ್ತಿಹಿಡಿಯುವುದು. ಸಂವಿಧಾನವನ್ನು ರಕ್ಷಣೆ ಮಾಡುವುದು. ಸರ್ವಧರ್ಮ ಸಮಭಾವ ಹಾಗೂ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಳ್ಳುವುದು. ದೇಶದ ಏಕತೆಯನ್ನು ಗಟ್ಟಿಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಮಾವೇಶದಲ್ಲಿ ಸುಮಾರು 20ರಿಂದ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಹಬಾಳ್ವೆ ಎನ್ನುವುದು ಭಾರತದ ಜನರ ಸಹಜ ಬದುಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಲ್ಪನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ಮಾನವ ಜೀವ ಹಾಗೂ ಘನತೆಯ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಲಬುರಗಿ ಮರುಳಕಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಮಹಾಸ್ವಾಮಿ, ಜಲಸಂಪನ್ಮೂಲಸಚಿವ ಡಿ.ಕೆ. ಶಿವಕುಮಾರ್, ಸಿಪಿಐ(ಎಂ) ಮುಖಂಡ ಜಿ.ಎನ್. ನಾಗರಾಜ್, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತಾ, ಅಂಕಣಕಾರ ಶಿವಸುಂದರ್, ಚಿಂತಕ ದಿನೇಶ್ ಅಮೀನ್ ಮಟ್ಟು, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ದಲಿತ ಚಿಂತಕ ಇಂದೂಧರ
ಹೊನ್ನಾಪುರ ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ದಲಿತ ಮುಖಂಡ ಶ್ಯಾಂರಾಜ್ ಬಿರ್ತಿ, ಹಿರಿಯ ಚಿಂತಕ ಜಿ. ರಾಜಶೇಖರ್, ಧರ್ಮಗುರು ವಿಲಿಯಂ ಮಾರ್ಟಿಸ್, ಸಹಬಾಳ್ವೆಯ ಯಾಸೀನ್ ಮಲ್ಪೆ, ವೆರೋನಿಕಾ ಕರ್ನೇಲಿಯೊ, ಪ್ರಮೀಳಾ ಜತ್ತನ್ನ, ರೋಶನಿ ಒಲಿವೆರಾ, ಜನಾರ್ದನ್ ಭಂಡಾರ್ಕರ್, ಅನಿತಾ ಡಿಸೋಜ, ಸ್ಟೀವನ್ ಕುಲಾಸೊ ಇದ್ದರು.