ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಕಾಣಿಕೆ ಸಮರ್ಪಣೆ

ಉಡುಪಿ: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ನವೀಕೃತ ಶ್ರೀನಾಗದೇವರ ಗುಡಿ ಸಮರ್ಪಣೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವದ ಹೊರೆಕಾಣಿಕೆ ಮೆರವಣಿಗೆ ಗುರುವಾರ ಅದ್ಧೂರಿಯಾಗಿ ನಡೆಯಿತು.

ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಡುಪಿ ಶ್ರೀಕೃಷ್ಣಮಠದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.ಬಳಿಕ ಕೃಷ್ಣಮಠದ ರಾಜಾಂಗಣದಿಂದ ಆರಂಭಗೊಂಡ ವೈಭವದ ಮೆರವಣಿಗೆ ಸಗ್ರಿ ದೇಗುಲಕ್ಕೆ ತಲುಪಿತು.

ಹೊರೆಕಾಣಿಕೆ ಮೆರವಣಿಗೆಯಲ್ಲಿ ಕೊಂಬು, ಕಹಳೆ, ಚೆಂಡೆ, ಬ್ಯಾಂಡ್ ಮೆರಗು ಹೆಚ್ಚಿಸಿತ್ತು.

ನಾಡಡೋಲು, ಬಿರುದಾವಳಿ, ಘಟೋದ್ಗಜ, ಸ್ವರ್ಣಕಲಶ, ಶಂಖನಾದ, ಜಾಗಂಟೆ, ಪೂರ್ಣಕುಂಭ, ತಟ್ಟಿರಾಯ, ಮುಖವಾಡ, ಕೀಲು ಕುದುರೆ, ಸ್ತಬ್ಧಚಿತ್ರ, ಕುಣಿತ ಭಜನಾ ತಂಡ, ಕುಣಿತ ಚೆಂಡೆ, ಹುಲಿವೇಷ ಕುಣಿತ ತಂಡ ಸೇರಿದಂತೆ ನಾನಾ ಸ್ತಬ್ಧ ಚಿತ್ರ‌ ಮೆರವಣಿಗೆಯ ವೈಭವವನ್ನು ಇಮ್ಮಡಿಗೊಳಿಸಿತು.

ಮೆರವಣಿಗೆಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಆಡಳಿತ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಪಾಡಿಗಾರು ಶ್ರೀನಿವಾಸ ತಂತ್ರಿ, ಗೋಪಾಲ್ ಜೋಯಿಸ್, ಸುಬ್ರಹ್ಮಣ್ಯ ಭಟ್, ಪ್ರದೀಪ್ ರಾವ್, ಅನಂತ ಸಾಮಗ, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಪ್ರಸಾದ್ ಪಾಡಿಗಾರು ಮೊದಲಾದವರು ಉಪಸ್ಥಿತರಿದ್ದರು.