ಕೇಸರಿ ಪೇಟ- ಹಿಜಾಬ್ ವಿವಾದ; ಎಂಜಿಎಂ ಕಾಲೇಜಿಗೆ ಅನಿರ್ದಿಷ್ಟಾವಧಿವರೆಗೆ ರಜೆ ಘೋಷಣೆ

ಉಡುಪಿ: ಕಾಲೇಜಿನಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ  ಅನಿರ್ದಿಷ್ಟಾವಧಿವರೆಗೆ ಕಾಲೇಜಿಗೆ ರಜೆ ಕೊಟ್ಟಿದ್ದೇವೆ. ಕೋರ್ಟ್ ಆದೇಶ ಏನು ಬರುತ್ತದೆ ಎಂಬುವುದನ್ನು ಕಾದು ನೋಡುತ್ತೇವೆ. ಮುಂದಿನ ತೀರ್ಮಾನ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪಿಯುಸಿ ಹಾಗೂ ಪದವಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದೇವೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಡಾ. ದೇವಿದಾಸ್ ಎಸ್.ನಾಯ್ಕ್ ತಿಳಿಸಿದ್ದಾರೆ.

ಕೇಸರಿ ಪೇಟ ವಿವಾದದಿಂದ ಕಾಲೇಜಿನಲ್ಲಿ ಮಂಗಳವಾರ ಉಂಟಾದ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಂಜಿಎಂ ಕಾಲೇಜಿನಲ್ಲಿ ಅಂತಹ ಸಮಸ್ಯೆ ಇಲ್ಲ. ಇದೊಂದು ಆರೋಗ್ಯಕರ ಕಾಲೇಜು ಕ್ಯಾಂಪಸ್. ಹೊರಗೆ ನಡೆಯುತ್ತಿರುವ ವಿವಾದದಿಂದ ನಮ್ಮ ವಿದ್ಯಾರ್ಥಿಗಳು ಸ್ವಲ್ಪಮಟ್ಟಿಗೆ ಪ್ರೇರಿತರಾಗಿದ್ದಾರೆ ಬಿಟ್ಟರೆ ಬೇರೇನೂ ಆಗಿಲ್ಲ ಎಂದರು.

ಈಗ ಪರೀಕ್ಷೆಯ ಬಗ್ಗೆ ಯಾವುದೇ ಗೊಂದಲ ಇಲ್ಲ. ಈ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಸದ್ಯ ವಿದ್ಯಾರ್ಥಿಗಳನ್ನು ಮನೆಗೆ ಹೋಗುವಂತೆ ತಿಳಿಸಿದ್ದೇವೆ. ಕಾಲೇಜು ಶುರು ಆದಾಗ ತಿಳಿಸುತ್ತೇವೆ ಎಂದು ಹೇಳಿದರು.