ಕ್ಷಣ ಕ್ಷಣ ಬದಲಾಗುವ ಪ್ರಕೃತಿಯಿಂದ ಏನನ್ನೂ ನಿರೀಕ್ಷಿಸಬೇಡ….. ವೈಲ್ಡ್ ಲೈಫ್ ಛಾಯಾಗ್ರಾಹಕ ಕಂಡ ಕಾಡಿನ ರೋಚಕ ಕಥನ

ಹೊಸದೊಂದು ಕಥೆ ಬರೆಯುತಿರುವೆ ಮಾಡಿ ಹಳೆ ಪದಗಳ ರಿಪೇರಿ. ಎಂದಿನಂತೆ ದಿನ ಸಾಗುತ್ತಿತ್ತು. ಸಾಮಾನ್ಯ ದಿನವೆಂಬಂತೆ ನನ್ನ ದೈನಂದಿನ ಕೆಲಸದಲ್ಲಿ ತೊಡಗಿರುವಾಗ ನನ್ನ ಗುರುಗಳಾದ ಶ್ರೀಕಾಂತ್ ಸರ್ ನನಗೆ ಕರೆ ಮಾಡಿ “ಕಾಡಲ್ಲಿ ಹುಲಿಯ ತಾಜಾ ಹೆಜ್ಜೆ ಗುರುತು ಕಂಡಿದೆಯಂತೆ ಬಾ ಹೋಗೋಣ” ಅಂತ ಕರೆದರು. ನಾನು ಬಹಳ ಉತ್ಸಾಹದಿಂದ ಎಲ್ಲಾ ಕೆಲಸ ಅರ್ಧಕ್ಕೆ ನಿಲ್ಲಿಸಿ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ಮಧ್ಯಾಹ್ನ ಸುಮಾರು 1.30ಕ್ಕೆ ಮನೆ ಬಿಟ್ಟು ಭಾರೀ ಹುಮ್ಮಸ್ಸಿನಲ್ಲಿ ಕಾಡಿನತ್ತ ಹೊರಟೆ. ಸರ್ ನ ಮನೆ ಕಾಡಿಗೆ ಹೋಗುವ ದಾರಿಯಲ್ಲಿ ಬರುವುದರಿಂದ ಜೊತೆಗೆ ಹೊರಟೆವು. ಅರೇ…. ನಾನು ಯಾವ ಕಾಡಿಗೆ ಹೋಗುತ್ತಿದ್ದೇನೆ ಅಂತ ಹೇಳಲೇ ಇಲ್ಲ, ಕ್ಷಮೆ ಇರಲಿ. ನಾನು ಪಯಣ ಬೆಳೆಸಿದ್ದು ಭದ್ರಾ ಅಭಯಾರಣ್ಯಕ್ಕೆ. ಅದು ಹುಲಿ ಸಂರಕ್ಷಿತ ಪ್ರದೇಶ. ನಾನು ಇದುವರೆಗೆ ಸುಮಾರು ಎಂಟುಸಫಾರಿ ಮಾಡಿದ್ದು ಅದರಲ್ಲಿ ಅತೀ ಹೆಚ್ಚು ಕುತೂಹಲ ಮೂಡಿಸಿದ್ದು ಎಂಟನೆಯ ಸಫಾರಿ.

ಹಾಗೆ ಹೋಗುವಾಗ ದಾರಿಯಲ್ಲಿ ಸಿಗುವ ಪ್ರಕೃತಿಯ ಪ್ರಶಾಂತತೆ ಮನಕ್ಕೆ ಹಿತವಾಗಿತ್ತು. ಎಲ್ಲೆಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪ್ರಕೃತಿಯನ್ನು ಅನುಭವಿಸಲು ಎರಡು ಕಣ್ಣು ಸಾಲದು ಎನಿಸುತ್ತದೆ. ಸುಮಾರು ಮಧ್ಯಾಹ್ನ ಮೂರು ಗಂಟೆಗೆ ಭದ್ರಾ ಅಭಯಾರಣ್ಯಕ್ಕೆ ತಲುಪಿದೆವು. ಅಲ್ಲೇ ಸ್ವಲ್ಪ ಕಾಲ ಕಳೆದು ಸುಮಾರು 3.30ಕ್ಕೆ ಕಾಡಿನತ್ತ ಪಯಣ ಶುರು ಮಾಡಿದೆವು. ಅಲ್ಲಿ ಮಂಜು ಎನ್ನುವವರು ನಮ್ಮ ಜೊತೆ ಜೀಪಲ್ಲಿ ಬಂದು ನಮ್ಮನ್ನು ಅರಣ್ಯದೊಳಗೆ ಕರೆದುಕೊಂಡು ಹೋದರು. ಕಾಡಿನ ಅನುಭವವೇ ವಿಶೇಷ, ಅಲ್ಲಿಗೆ ಹೋಗುವಾಗ ಎಲ್ಲವನ್ನೂ ಮರೆತು ಯಾವುದೋ ಬೇರೆ ಪ್ರಪಂಚಕ್ಕೆ ಹೋದಂತೆ ಭಾಸವಾಗುತ್ತದೆ. ಕಾಡಿನ ವೈಶಿಷ್ಟ್ಯವೆ ಹೀಗೆ ನೋಡಿ. ಹಾಗೆ ದಾರಿಯಲ್ಲಿ ಹೋಗುತ್ತಾ ಹಲವಾರು ವನ್ಯ ಜೀವಿಗಳು, ಇತರ ಜೀವ ವೈವಿಧ್ಯ, ಈ ನೆಲದ ವೈಶಿಷ್ಟ್ಯತೆಯನ್ನು ನೋಡಬಹುದು. ಅಲ್ಲಿನ ಪಕ್ಷಿಗಳು ಹಾರುವುದನ್ನು ನೋಡಿ ಹೃದಯ ಹಗುರಾಗಿದೆ. ಜಿಂಕೆಯ ಮುಗ್ಧತೆಯ ನೋಡಿ ಮರೆತು ನಿಂತೆ. ನಿನ್ನ ಸನಿಹದಲ್ಲಿ ನನ್ನೆ ನಾ…. ಅದರಲ್ಲೂ ಕಾಡಿನ ಸೂಕ್ಷ್ಮತೆಯನ್ನು ಅರಿಯಲು ಶುರು ಮಾಡಿದಾಗ ವಿಸ್ಮಯತೆಯನ್ನು ಒಂದೊಂದಾಗಿ ಬಿಚ್ಚಿಡತೂಡಗಿತು.

‘All experience is an arch to build upon’ ಎನ್ನುವಂತೆ ಸೂಕ್ಷ್ಮತೆ ಇಲ್ಲದಿದ್ದರೆ ಕಾಡಿನ ಸುಂದರ ಅನುಭವ ಖಂಡಿತವಾಗಿಯೂ ಆಗುವುದಿಲ್ಲ. ಸಣ್ಣ ವಿವರಗಳು ಕಳೆದು ಹೋಗುತ್ತವೆ. ಹಾಗಾಗಿ ಹೆಚ್ಚು ಸೂಕ್ಷ್ಮವಾದ ವೀಕ್ಷಣೆ ಇರಬೇಕು. ಹಾಗೇಯೇ ಮುಂದೆ ಹೋಗುತ್ತಾ ಭದ್ರೆಯ ಹಿನ್ನೀರ ಹತ್ತಿರ ಬೀಡು ಬಿಟ್ಟೆವು. ಅಲ್ಲಿನ ಸನ್ನಿವೇಶ ಹೇಗಿತ್ತೆಂದರೆ ನಿಧಾನವಾಗಿ ಬೇಟೆಯ ಪರಿಸ್ಥಿತಿಗೆ ಅನುಗುಣವಾಗಿತ್ತು. ಆ ಕ್ಷಣಕ್ಕೆ ನಮ್ಮ ಗಮನಕ್ಕೆ ಬಾರದಿದ್ದರೂ ಕಾಲ ಕ್ರಮೇಣ ಕಾಡಿನಲ್ಲಿರುವ ಪ್ರಾಣಿಗಳ ವರ್ತನೆಯಿಂದ ನಮಗೆ ಪರಿಸ್ಥಿತಿಯು ಅರಿವಿಗೆ ಬಂತು.

ಒಂದು ಕಡೆ ನವಿಲು ನೀರಿನ ಬಳಿ ಅದರ ಪಾಡಿಗೆ ಆಡುತ್ತಿದೆ, ಮತ್ತೊಂದು ಬದಿಯಲ್ಲಿ ಬೂದು ಲಂಗೂರ್ ಜಿಗಿಯುತ್ತಿದೆ. ಇದು ಮಂಗಗಳಲ್ಲಿರುವ ಒಂದು ಪ್ರಜಾತಿ. ಇದರ ಕೂಗಿನ ತೀವ್ರತೆಯಿಂದ ಕಾಡಿನಲ್ಲಿ ಅಲ್ಲಿ ಹುಲಿ ಅಥಾವ ಚಿರತೆಯ ಇರುವಿಕೆಯ ಬಗ್ಗೆ ಖಚಿತವಾಗಿ ಗೊತ್ತಾಗುತ್ತದೆ. ಇದರ ಜೊತೆಗೆ ಮಚ್ಚೆಯುಳ್ಳ ಜಿಂಕೆ ಜಿಂಕೆಗಳೂ ಅದೇ ಸಮಯದಲ್ಲಿ ಕೂಗುತ್ತವೆ. ಅದನ್ನು ‘ಎಚ್ಚರಿಕೆ ಘಂಟೆ’ ಎನ್ನುತ್ತೇವೆ. ಮೊದಲಿಗೆ ಬೂದು ಲಂಗೂರ್ ನ ಧ್ವನಿ ಸ್ವಲ್ಪ ನಿಧಾನವಾಗಿತ್ತು. ಕ್ರಮೇಣವಾಗಿ ಅದರ ಧ್ವನಿಯ ಏರಿಳಿತ ಹೆಚ್ಚಾಗಿತ್ತು. ಕಾಡಿನ ನಿಶ್ಯಬ್ದವು ಕಾಡತೊಡಗಿತು. ಸುತ್ತಲಿನ ಗಾಳಿಯು ಸ್ವಲ್ಪ ಮಟ್ಟಿಗೆ ಮೌನದಿ ಬೀಸುತ್ತಿತ್ತು. ಎಲ್ಲೂ ಅನುಭವಿಸದ ಮೌನವು ಎದೆಯ ತುಂಬಾ ಆವರಿಸಿಬಿಟ್ಟಿತು…..

ಮತ್ತೊಮ್ಮೆ ಬೂದು ಲಂಗೂರ್ ನ ಕೂಗಿನ ತೀವ್ರತೆ ಹೆಚ್ಚಾಯಿತು. ಇದ್ದಕ್ಕಿದ್ದಂತೆ ಜಿಂಕೆಗಳೆಲ್ಲಾ ಗುಂಪಾಗಿ ಹಿನ್ನೀರ ಹತ್ತಿರ ಓಡಿ ಬಂದವು. ನಾವು ಜಿಂಕೆಗಳಿಂದ ಸ್ವಲ್ಪವೇ ದೂರ ನಿಂತು ಎಲ್ಲಾ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರಿಯುತ್ತಿದ್ದೆವು. ಜಿಂಕೆಯ ವರ್ತನೆ ಗಾಬರಿಯನ್ನು ಹೊತ್ತು ತಂದಿತ್ತು. ವಿಶೇಷ ಎಂದರೆ ನಂಗೆ ಇದು ಹೊಸ ಅನುಭವ, ಕುತೂಹಲ ಹೆಚ್ಚಾದ ಕಾರಣ ನನ್ನೊಳಗಿನ ಹೃದಯದ ಬಡಿತ ಹೆಚ್ಚಾಗುತ್ತಿತ್ತು. ಈ ಸಂದರ್ಭದಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ಮುನ್ಸೂಚನೆ ನೀಡಿತ್ತು.

ಈ ಸನ್ನಿವೇಶ ಒಂದೆಡೆಯಾದರೆ, ಮತ್ತೊಂದೆಡೆಯಲ್ಲಿ ಕಾಡಿನ ರಾಣಿ ಹುಲಿ ತನ್ನ ಮರಿಗಳೊಂದಿಗೆ ನಿಧಾನವಾಗಿ ಹೆಜ್ಜೆಯಿಟ್ಟಳು. ಆಕೆಯ ಗಾಂಭೀರ್ಯ ಈ ಕಾಡಿಗೆ ಚಿರಪರಿಚಿತ. ಹುಲಿಯ ಒಂದು ಘರ್ಜನೆಗೆ ಕಾಡನ್ನೆ ನಡುಗಿಸುವಷ್ಟು ಸಾಮರ್ಥ್ಯ ಹೊಂದಿದೆ. ಅದರೆ ಹುಲಿ ಕೋಪ ಮಾಡಿಕೊಂಡ ಉದಾಹರಣೆ ಸಿಗೋದು ಕಮ್ಮಿ. ಕಾಡಿನ ಒಳಗೆ ಹುಲಿಯ ಸಮಕ್ಷಮದಲ್ಲಿ ಈ ಎಲ್ಲಾ ವಿದ್ಯಮಾನಗಳು ನಡೆಯುತ್ತಿರುವುದನ್ನು ನೀಡಿ ಎದೆಯಲ್ಲಿ ಝಲ್ ಅಂದಿತ್ತು. ಇನ್ನೇನು ಜಿಂಕೆಗಳ ಗತಿ ಮುಗಿಯಿತು ಅಂತ ಅನ್ನೋವಷ್ಟರಲ್ಲಿ…………

ನಮ್ಮ ನಿರೀಕ್ಷೆ ಹುಸಿಯಾಯಿತು. ಕಾಡು ತನ್ನ ಕೈ ಚಳಕ ತೋರಿಸಿ ಮತ್ತೆ ಹೊಸ ಪಾಠವನ್ನು ಕಲಿಸಿತು… ಕ್ಷಣ ಕ್ಷಣ ಬದಲಾಗುವ ಪ್ರಕೃತಿಯಿಂದ ಏನನ್ನೂ ನಿರೀಕ್ಷಿಸಬೇಡ ,ಇದುವೆ ಆ ಪಾಠ……. ಮೋಡ ಕರಗಿ ನೀರಾಯಿತು… ಕಾಡನ್ನು ವರುಣ ತೋಯ್ದು ತೊಪ್ಪೆಯಾಗಿಸಿದ. ಮಳೆ ಬಂದ ತಕ್ಷಣ ಜಿಂಕೆಯ ಗುಂಪು ಜಿಗಿದು ಎಲ್ಲೋ ಓಡಿ ಹೋದವು… ತಾಯಿ ಹುಲಿ ತನ್ನ ಮಕ್ಕಳೂಡನೆ ಸ್ವಸ್ಥಾನಕ್ಕೆ ಮರಳಿತು. ಈ ಘಟನೆಯನ್ನು ನೋಡುವ ಕಾತುರದಲ್ಲಿ ಕಾಲ ಕಳೆದು ಹೋದದ್ದು ಗೊತ್ತೇ ಆಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದು ಹಿತವಾದ ಅನುಭವದಿಂದ ನಮಗೆ ರೋಮಾಂಚನ… ಎದೆಯೊಳಗೆ ಏನೋ ಒಂದು ಭಾವನೆ ಹೊತ್ತು ಕಾಡಿನಿಂದ ಮರಳಿ ಮನೆಯತ್ತ ಪಯಣಿಸಿದೆವು. ಬಹುಶಃ ಪ್ರಕೃತಿಯೊಡನಾಡಿದ ಈ ಘಳಿಗೆ ನನ್ನ ನೆನಪಿನಲ್ಲಿ ದೀರ್ಘ ಕಾಲದವರೆಗೆ ಹಸಿರಾಗಿ ಉಳಿಯಲಿದೆ…
-ಕುನಾಲ್.ಜಿ.ಎಸ್, ವೈಲ್ಡ್ ಲೈಫ್ ಛಾಯಾಗ್ರಾಹಕ