ಸಾಲಿಗ್ರಾಮ ಪ.ಪಂ.: ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಜುಲೈ 26: ಜಿಲ್ಲೆಯಲ್ಲಿ ಮಳೆಗಾಲವು ಈಗಾಗಲೇ ಆರಂಭವಾಗಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಸಾಕಷ್ಟು ಮುಂಜಾಗೃತೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ವ್ಯಾಪಾರಸ್ತರು ಪ್ಲಾಸ್ಟಿಕ್‍ನ್ನು ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚರಂಡಿಗೆ ಕಸಕಡ್ಡಿಗಳನ್ನು/ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುವುದನ್ನು ನಿಷೇಧಿಸಲಾಗಿದ್ದು, ಗೂಡಂಗಡಿ ಮಾಲೀಕರು ಉಪಯೋಗಿಸಿದ ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಲು ಸೂಚಿಸಿದೆ.
ಕೆಲವೆಡೆ ಈಗಾಗಲೇ ಡೆಂಗ್ಯೂ ರೋಗ ಕಾಣಿಸಿದ್ದು, ಡೆಂಗ್ಯೂ ಖಾಯಿಲೆಯು ವೈರಸ್ ರೋಗಾಣುವಿನಿಂದ ಉಂಟಾಗುವುದು ಮತ್ತು ಈಡೀಸ್ ಸೊಳ್ಳೆಗಳು ಕಚ್ಚುವುದರಿಂದ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ.
ಈಡೀಸ್ ಸೊಳ್ಳೆಗಳ ನಿಯಂತ್ರಣ, ಡೆಂಗ್ಯೂ ರೋಗದ ಹತೋಟಿಗೆ ಮುಖ್ಯ ವಿಧಾನ ಸೊಳ್ಳೆಗಳು ಗೃಹೋಪಯೊಗಕ್ಕೆಂದು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು, ಡ್ರಂಗಳು, ಬ್ಯಾರಲ್, ಮಡಕೆ ಮುಂತಾದ ನೀರಿನ ಶೇಖರಣೆಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ಬಗ್ಗೆ ಹೆಚ್ಚಿನ ಗಮನವಿಟ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ನೀರು ಸಂಗ್ರಹವಾಗುವ ಓವರ್ ಹೆಡ್ ಟ್ಯಾಂಕ್‍ಗಳನ್ನು ವಾರಕ್ಕೊಮ್ಮೆ ಪೂರ್ತಿ ನೀರು ಖಾಲಿ ಮಾಡಿ ಶುಚಿಗೊಳಿಸಬೇಕು. ಅಂಗಡಿ ಮುಂಗಟ್ಟು ಮನೆ ಪರಿಸರದಲ್ಲಿ ಮನೆಯ ಸಮೀಪ ಇರುವ ಅನುಪಯುಕ್ತ ಟಯರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಕುಡಿಯುವ ನೀರು ಸರಬರಾಜಾಗುವ ಕೊಳವೆಗಳು(ಪೈಪುಗಳು) ಒಡೆದು ಸೋರುವಿಕೆಯಿಂದ ಕುಡಿಯುವ ನೀರು ಕಲುಷಿತವಾಗುವುದನ್ನು ಗುರುತಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು ಹಾಗೂ ಸ್ವಯಂ ರಕ್ಷಣಾ ವಿಧಾನಗಳಿಂದ ಸೊಳ್ಳೆ ನಿರೋಧಕಗಳನ್ನು ಹಾಗೂ ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು. ಅದರಲ್ಲಿಯೂ ಕೀಟನಾಶಕ ಸಿಂಪಡಿಸಿದ ಸೊಳ್ಳೆ ಪರದೆಗಳು ಅತ್ಯುತ್ತಮ. ಸಂಜೆ ಮತ್ತು ರಾತ್ರಿ ವೇಳೆ ಮೈ ತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರುವುವಂತೆ, ಯಾವುದೇ ರೀತಿಯಲ್ಲಿ ಸಾಂಕ್ರಾಮಿಕ ರೋಗವು ಉತ್ಪತ್ತಿಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ಜ್ವರ/ತಲೆನೋವು ಇತ್ಯಾದಿಗಳು ಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಕಾದಾರಿದ ನೀರನ್ನೇ ಉಪಯೋಗಿಸಬೇಕು. ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ನೈಸರ್ಗಿಕವಾಗಿ ಹರಿಯುವ ನೀರಿಗೆ ಅಡ್ಡಿ ಉಂಟುಮಾಡದೇ ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.