ಮಂಗಳೂರು: ದೇವಮಾನವ ಕೀರ್ತಿಶೇಷ ಪಾಲ್ಕೆ ಬಾಬುರಾಯ ಆಚಾರ್ಯರ ತ್ಯಾಗ, ಸೇವೆ, ಸಮರ್ಪಣಾ ಭಾವಗಳ ನೆನಪು ಬದುಕಿಗೆ ದಾರಿದೀಪವಾಗಬೇಕು. ದೇವಮಾನರೆಂದೇ ಕರೆಯಲ್ಪಡುವ ಪಾಲ್ಕೆ ಬಾಬುರಾಯ ಆಚಾರ್ಯರು ‘ಸರಳ ಜೀವನ, ಉದಾತ್ತ ಚಿಂತನೆ’ ಇದು ಅವರ ಬದುಕಿನ ಬಹುಮುಖ್ಯ ಮೌಲ್ಯವಾಗಿತ್ತು “ಇಂದಿಗೂ ಸಾವಿರಾರು ಜನರ ಹೃದಯದಲ್ಲಿ ಪಾಲ್ಕೆ ಬಾಬುರಾಯ ಆಚಾರ್ಯರು ಜೀವಂತವಾಗಿದ್ದಾರೆ ಎಂದು ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಆಚಾರ್ಯ ಅಭಿಪ್ರಾಯಪಟ್ಟರು.
ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ ಆಯೋಜಿಸಿದ್ದ ವಜ್ರಮಹೋತ್ಸವ ಮತ್ತು ಸಂಸ್ಥೆಯ ಸ್ಥಾಪಕರಾದ ಪಾಲ್ಕೆ ಬಾಬುರಾಯ ಆಚಾರ್ಯರ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರ ಸಿಂಚನ -2025 ಸಮಾರಂಭದಲ್ಲಿ ಶುಭಾಶಂಸನೆ ನೀಡಿದರು.

ಪಾಲ್ಕೆ ಬಾಬುರಾಯ ಆಚಾರ್ಯರನ್ನು ದೇವಮಾನವನಾಗಿಸಿದ ಮೌಲ್ಯ ಅದು ‘ಧರ್ಮ’. ಪಾಲ್ಕೆಯವರು ಪ್ರಾಜ್ಞರ ಸಹವಾಸ, ಸಹಕಾರದಿಂದ ಧರ್ಮವನ್ನು ಅರಿತು ಆಚರಿಸಿದವರು, ಎಲ್ಲರಿಗೂ ಲೇಸನ್ನೇ ಬಯಸುವ ವಿಶಾಲ ಹೃದಯವುಳ್ಳವರಾಗಿದ್ದರು. ಸ್ವಸಮಾಜದ ಬಂಧುಗಳಿಂದ ಮಾತ್ರವಲ್ಲದೆ ಅನ್ಯ ಸಮಾಜದವರಿಂದಲೂ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಸ್ವಧರ್ಮಾಚರಣನಿಷ್ಠೆ, ಪರೋಪಕಾರ, ಸಹಾನುಭೂತಿ ಈ ಎಲ್ಲಾ ಸದ್ಗುಣಗಳಿಂದ ಅವರಲ್ಲಿ ವಿಶಿಷ್ಟವಾದ ನೈತಿಕ ಶಕ್ತಿ ಜಾಗೃತವಾಗಿದ್ದಿತು. ಅವರಲ್ಲಿದ್ದ ಈ ಶಕ್ತಿಯಿಂದ ಅನೇಕ ಹಿರಿಯ ಮುತ್ಸದ್ದಿಗಳೂ ಆಕರ್ಷಿತರಾಗಿದ್ದರು.

ವಿಶ್ವಬ್ರಾಹ್ಮಣರಲ್ಲಿ ಪೌರೋಹಿತ್ಯ ಅಭ್ಯಾಸ ಮಾಡುವಂತಹ ಆಸಕ್ತಿ ಉಳ್ಳವರಿಗೆ ವೈದಿಕ ಪಾಠ, ಸಂಸ್ಕೃತ ಪಾಠವಾಗಬೇಕು ಎನ್ನುವ ಸದುದ್ದೇಶದಿಂದ ಪಾಲ್ಕೆಯವರು 1957ರಲ್ಲಿ ಮೂಡುಬಿದಿರೆಯ ಆಲಂಗಾರಿನ ನಾಗಲಿಂಗಸ್ವಾಮಿ ಮಠದಲ್ಲಿ ಸಂಸ್ಕೃತ ವೈದಿಕ ಪಾಠಶಾಲೆಯನ್ನು ಪ್ರಾರಂಭಿಸಿದರು. ಒಂದು ಸಮಾಜದ ಸುಸಂಸ್ಕೃತಿ, ಸಮೃದ್ಧಿ, ಸಮಾಜದ ಜ್ಞಾನಸಂಪನ್ನತೆ, ಜ್ಞಾನನಿಷ್ಠೆಯ ಸೂಕ್ಷ್ಮವನ್ನು ಗ್ರಹಿಸಿದ್ದ ಪಾಲ್ಕೆಯವರು ವಿದ್ಯಾಭ್ಯಾಸ, ಸಾಹಿತ್ಯ, ಕಲೆಗಳ ವಿಕಾಸಕ್ಕೆ ನಮ್ಮಲ್ಲಿ ಅಪೂರ್ವ ಎನ್ನಬಹುದಾದಷ್ಟು ಪ್ರೋತ್ಸಾಹವನ್ನು ಕೊಟ್ಟರು ಎಂದು ಹೇಳಿದರು.

ದೀಪ ಪ್ರಜ್ವಲನೆ ಮಾಡಿದ ದಿ.ಬಾಬುರಾಯ ಆಚಾರ್ಯರ ಪುತ್ರ ಕೆನರಾ ಜ್ಯುವೆಲ್ಲೆರ್ಸ್‌ನ ಧನಂಜಯ ಪಾಲ್ಕೆಯವರು ತನ್ನ ತಂದೆ ಸ್ಥಾಪನೆ ಮಾಡಿದ ಸಂಸ್ಥೆಯಲ್ಲಿ ಅವರ 110ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರ ಬಿಡಿಸುವ ಮೂಲಕ ಮಾಡಿದ ಎಸ್.ಕೆ.ಜಿ.ಐ. ಸೊಸೈಟಿಯ ಆಡಳಿತ ವರ್ಗ, ಸಿಬ್ಬಂದಿ ವರ್ಗವನ್ನು ಪ್ರಶಂಸಿ, ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ, ಎಸ್.ಕೆ.ಜಿ.ಐ.ನ ಎಲ್ಲಾ ಆಡಳಿತ ಮಂಡಳಿಯ ನಿರ್ದೇಶಕರಿಗೆ, ಸಿಬ್ಬಂದಿಯವರಿಗೆ, ಚಿನ್ನದ ನಾಣ್ಯ ಮತ್ತು ಎಲ್ಲಾ ಶಾಖೆಗಳಿಗೆ ಪಾಲ್ಕೆ ಜನ್ಮಶತಮಾನೋತ್ಸವದ ಸವಿನೆನಪಿನ ಬೆಳ್ಳಿಯ ಸ್ಮರಣಿಕೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಚಿತ್ರ ಕಲಾವಿದರು, ವಿಶ್ವಕರ್ಮ ಕಲಾ ಪರಿಷತ್ ಗೌರವಾಧ್ಯಕ್ಷರಾದ ಪಿ.ಎನ್.ಆಚಾರ್ಯ ಮತ್ತು ಚಿತ್ರ ಕಲಾವಿದೆ ಜಯಶ್ರೀ ಶರ್ಮ ಉಪಸ್ಧಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಜಿ.ಐ. ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಪಿ.ಉಪೇಂದ್ರ ಆಚಾರ್ಯರು ವಿಶ್ವಬ್ರಾಹ್ಮಣ ಸಮಾಜದ ದೇವಮಾನವರಾಗಿದ್ದ ಪಾಲ್ಕೆಯವರು ಅತ್ಯಂತ ದೂರದೃಷ್ಟಿಯಿಂದ ದಶಕಗಳ ಕಾಲದಿಂದ ನಮ್ಮ ಸೊಸೈಟಿ ಮತ್ತು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜದ ಎಲ್ಲಾ ವರ್ಗದ ಜನರನ್ನು ಮುಂದೆ ಬರಲು ಕಾರಣಿಕರ್ತರಾಗಿದ್ದರು.

ಇಂದು ಅವರ ಪುತ್ರ ಧನಂಜಯ ಪಾಲ್ಕೆಯವರು ತನ್ನ ತಂದೆಯವರ 110ನೇ ಜನ್ಮಶತಮಾನೋತ್ಸವದ ಸವಿನೆನಪಿಗಾಗಿ ಎಸ್. ಕೆ. ಜಿ. ಐ. ಕೋ- ಆಪರೇಟಿವ್ ಸೊಸೈಟಿಯ ಎಲ್ಲರಿಗೂ ಚಿನ್ನದ ನಾಣ್ಯ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.ಸಹಕಾರ ಶಿಕ್ಷಣ ನಿಧಿಗೆ ರೂ. 9,14,143ನ್ನು ಕರ್ನಾಟಕ ರಾಜ್ಯ ಮಹಾಮಂಡಳಕ್ಕೆ ಮೂಡುಬಿದಿರೆ ಕೋ- ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಶಿಕ್ಷಕಿ ಬಿಂದು ನಾಯರ್ ಮೂಲಕ ಹಸ್ತಾಂತರಿಸಲಾಯಿತು.

ಅಂತಿಮ ಸುತ್ತಿನಲ್ಲಿ ಭಾಗವಹಿಸಿದ ಚಿತ್ರ ಕಲಾವಿದರಿಗೆ ಪ್ರೋತ್ಸಾಹಕ ನಗದನ್ನು ಮಾಜಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿದ್ದ ರಜನಿ ಎಸ್. ಪೈ ನೀಡಿದರು. ನಿರ್ದೇಶಕರಾದ ವೈ.ವಿ.ವಿಶ್ವಜ್ಞಮೂರ್ತಿ ಪ್ರಾರ್ಥನೆಗೈದರು. ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಆಚಾರ್ಯ ಪ್ರಸ್ತಾವನೆಗೈದು ಸ್ವಾಗತಿಸಿದರು. ನಿರ್ದೇಶಕರಾದ ಕೆ. ಪ್ರಕಾಶ್ ಆಚಾರ್ಯ ವಂದಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.












