ಮಂಗಳೂರು: 61 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯು ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಮಹತ್ತರ ಕೆಲಸವನ್ನು ಮಾಡುತ್ತಿದೆ. ಯಾವುದೇ ಒಂದು ಸಮಾಜದ ಅಭಿವೃದ್ಧಿ ಹಾಗೂ ಏಳಿಗೆಗೆ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಂಗೇರಿ ವಿಶ್ವಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿ ಹೇಳಿದರು.
ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ವತಿಯಿಂದ ಶ್ರೀರಾಧಾಕೃಷ್ಣ ದೇವಸ್ಥಾನದ ಬಾಳಂಭಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು ಡಾ.ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿ ಉದ್ಘಾಟಿಸಿದರು.
ಈಗಿನ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಚಿಂತನಾ ಶಕ್ತಿ ಹಾಗೂ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಬಾಹ್ಯಾ ಕರ್ಷಣೆಯ ವಸ್ತುಗಳು ಬಹಳಷ್ಟು ತೊಂದರೆಯನ್ನೊಡುತ್ತಿವೆ. ಇನ್ನುಳಿದ ವಿಚಾರಗಳಿಗಿಂತ ವಿದ್ಯಾರ್ಥಿಗಳ ವರ್ತನೆ ಹಾಗೂ ಸಂಸ್ಕೃತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಪುರಸ್ಕಾರ ನೀಡಿ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮ ಮಾಡಲು ಹೃದಯ ಶ್ರೀಮಂತಿಕೆ ಬೇಕು. ಒಂದೊಳ್ಳೆ ಸಂಕಲ್ಪವನ್ನಿಟ್ಟುಕೊಂಡು ಸಮಾಜವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಜಿಐ. ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾತನಾಡಿ, ವೃತ್ತಿ ಜೀವನ ಪ್ರಾರಂಭವಾದಾಗಲೇ ಉಳಿತಾಯ ಮಾಡುವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 2024-25ರ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮತ್ತು ದಿ. ಬಂಟ್ವಾಳ ಗಣಪತಿ ಆಚಾರ್ಯ ಮತ್ತು ದಿ. ಕೃಷ್ಣಗೋಪಾಲ ಅವರ ಸ್ಮರಣಾರ್ಥ ಸಕ್ಕು ಬಾಯಿ ಮತ್ತು ರಜನಿ ಎಸ್.ಪೈ ನೀಡಿದ ಪ್ರತಿಭಾ ಪುರಸ್ಕಾರವನ್ನು 8 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಿರ್ದೇಶಕ ಜಯ ಆಚಾರ್ ವತಿಯಿಂದ ಎಸ್‌ಎಸ್ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು 2 ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. ಕೆನರಾ ಜುವೆಲರ್ಸ್‌ನ ದಿ. ಪಾಲ್ಕೆ ಬಾಬುರಾಯ ಆಚಾರ್ಯಸ್ಥರಣಾರ್ಥ ಅವರ ಮೊಮ್ಮಗ ಬಿ.ಬಿ. ಸುದರ್ಶನ್ ಆಚಾರ್ಯ ಎಸ್‌ಎಸ್‌ಎಲ್‌ಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನ ನೀಡಿದರು. ಜೋಕಟ್ಟೆ ಪ್ರಭಾಕರ ಆಚಾರ್ಯ ಅವರಿಂದ ಬಡ ವಿದ್ಯಾರ್ಥಿಗೆ ಸಹಾಯಹಸ್ತ ನೀಡಲಾಯಿತು. 363 ವಿದ್ಯಾರ್ಥಿಗಳಿಗೆ 11,70,000 ರೂ. ವಿದ್ಯಾರ್ಥಿ ವೇತನ ನೀಡಿ, ಪ್ರಮಾಣ ಪತ್ರ ವಿತರಿಸಲಾಯಿತು.
ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಸುಷ್ಮಾ ಪಿ.ಎಸ್. ಶುಭಾಶಂಸನೆ ನೀಡಿದರು. ಕೆನರಾ ಜುವೆಲ್ಲರ್ಸ್‌ನ ಧನಂಜಯ ಪಾಲ್ಕೆ, ಮಂಡ್ಯ ಎಸ್.ಎಸ್.ಕೆ. ವಿಶ್ವಕರ್ಮ ಸೇವಾ ಟ್ರಸ್ಟ್ ಸ್ಥಾಪಕ ಹಾಗೂ ಅಧ್ಯಕ್ಷ ಎಂ.ಬಿ.ರಮೇಶ ಆಚಾರ್ಯ, ಆಡಳಿತ ಮಂಡಳಿ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಎ. ಆನಂದ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಕೆ.ಪ್ರಕಾಶ್ ಆಚಾರ್ಯ ವಂದಿಸಿದರು. ಶ್ರೀಕಾಂತ್ ಮತ್ತು ಉಷಾ ಮನೋಜ್ ನಿರೂಪಿಸಿದರು.












