ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು:ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆ

ಕಾರ್ಕಳ : ಕ್ರೀಡೆಗಳು ವಿದ್ಯಾರ್ಥಿಗಳನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಬರಿಯ ಓದಿನ ಕಡೆಗೆ ಮಾತ್ರ ಗಮನ ನೀಡದೆ ಕ್ರೀಡೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಸಾಧನೆಗಳನ್ನು ಮಾಡಬೇಕು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕಾದರೆ ಕನಸುಗಳು ಮುಖ್ಯ. ಹಾಗೂ ಅದನ್ನು ಸಾಧಿಸುವ ಗುರಿ ಇರಬೇಕು. ದೃಢ ಪ್ರಯತ್ನದಿಂದ, ಗಟ್ಟಿ ಮನಸ್ಸಿದ್ದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಶ್ರೀ ಭುವನೇಂದ್ರ ಕಾಲೇಜಿನ ಟ್ರಸ್ಟಿ ಎ. ಚಂದ್ರಶೇಖರ ಹೆಗ್ಡೆ ಹೇಳಿದರು.

ಇವರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಕ್ಕಳು ಪ್ರತಿಯೊಂದರಲ್ಲೂ ಪ್ರತಿದಿನ ಹೊಸತನವನ್ನು ಕಾಣಬೇಕು. ಹೊಸ ವಿಚಾರಗಳನ್ನು ಅರಿತುಕೊಳ್ಳಬೇಕು. ನಮ್ಮೆಲ್ಲರ ಅತೀ ದೊಡ್ಡ ಕನಸಾಗಬೇಕಿರುವುದು ದೇಶ ಸೇವೆ. ದೇಶ ಸೇವೆಯೇ ಈಶ ಸೇವೆ ಎಂಬ ಮಾತಿನಂತೆ ಇಡೀ ದೇಶಕ್ಕೆ ಒಳ್ಳೆಯ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ದೇಶ, ಹಾಗೂ ದೇಶದ ಜನತೆಗೆ ಯಾವುದೇ ತೊಂದರೆ ಮಾಡದೇ ಇರುವುದು ಕೂಡ ದೇಶ ಸೇವೆಯೇ. ಕ್ರೀಡೆ ಹಾಗೂ ಸೇವೆಗಳಲ್ಲಿ ನಾವು ಪಾಲುಗೊಳ್ಳಲು ದೇಹದ ಆರೋಗ್ಯ ಮಾತ್ರವಲ್ಲ ಮನಸಿನ ಆರೋಗ್ಯ ಕೂಡ ಮುಖ್ಯ. ಆರೋಗ್ಯಕರ ಕ್ರೀಡಾ ಭಾವನೆಯನ್ನು ಪ್ರತಿಯೊಬ್ಬರೂ ತೋರಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಡಾ ಮಂಜುನಾಥ್ ಎ ಕೋಟ್ಯಾನ್ ಸ್ವಾಗತಿಸಿದರು, ಪ್ರಾಣಿಶಾಸ್ರ್ತ ವಿಭಾಗ ಉಪನ್ಯಾಸಕ ಈಶ್ವರ ಭಟ್ ನಿರೂಪಿಸಿದರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್ ಸಿ ವಂದಿಸಿದರು.