ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಜಿನ್ ಪಿಂಗ್: ಚಲಿಸುವ ಭದ್ರಕೋಟೆಯಂತಿದೆ ಇವರ ಕಾರುಗಳು!

ನವದೆಹಲಿ: ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಭದ್ರತೆ ಮಾತ್ರವಲ್ಲದೆ, ಅವರ ಅಧಿಕೃತ ವಾಹನಗಳೂ ಗಮನ ಸೆಳೆದಿವೆ. ಇಬ್ಬರೂ ತಮ್ಮದೇ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ವಿಶೇಷ ಆರ್ಮರ್ಡ್ ಕಾರುಗಳಲ್ಲಿ ಸಂಚರಿಸುತ್ತಿದ್ದು, ಭದ್ರತಾ ದೃಷ್ಟಿಯಿಂದ ಈ ವಾಹನಗಳನ್ನು ‘ಚಲಿಸುವ ಭದ್ರಕೋಟೆ’ಗಳೆಂದು ಕರೆಯಲಾಗುತ್ತದೆ.

ಪುಟಿನ್ ಅವರ ಔರಸ್ ಸೆನೆಟ್

ಪುಟಿನ್ ಅವರ ಅಧಿಕೃತ ವಾಹನ ಔರಸ್ ಸೆನೆಟ್. ರಷ್ಯಾದ ಔರಸ್ ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಾಧ್ಯಕ್ಷರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು 7 ಮೀಟರ್ ಉದ್ದವಿರುವ ಈ ವಾಹನ ಸಾಮಾನ್ಯ ಐಷಾರಾಮಿ ಸೆಡಾನ್‌ಗಳಿಗಿಂತ ದೊಡ್ಡದಾಗಿದೆ.

ಔರಸ್ ಸೆನೆಟ್‌ನಲ್ಲಿ 4.4 ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಹಾಗೂ ಹೈಬ್ರಿಡ್ ವ್ಯವಸ್ಥೆ ಇದ್ದು, ಸುಮಾರು 598 ಹಾರ್ಸ್‌ಪವರ್ ಮತ್ತು 880 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಎನ್ನಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ ಸುಮಾರು 249 ಕಿ.ಮೀ. ಎಂದು ವರದಿಗಳಿವೆ.

ಆರ್ಮರ್ಡ್ ಆವೃತ್ತಿಯಲ್ಲಿ VR10 ಮಟ್ಟದ ಬ್ಯಾಲಿಸ್ಟಿಕ್ ರಕ್ಷಣಾ ವ್ಯವಸ್ಥೆ ಇದೆ ಎಂಬ ವರದಿಗಳಿವೆ. ಬುಲೆಟ್‌ಪ್ರೂಫ್ ಗ್ಲಾಸ್, ರನ್-ಫ್ಲ್ಯಾಟ್ ಟೈರ್‌ಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ ನೀಡುವ ಹಲವು ವ್ಯವಸ್ಥೆಗಳು ಇದರಲ್ಲಿವೆ ಎನ್ನಲಾಗಿದೆ. ಬೆಂಕಿ ಮತ್ತು ರಾಸಾಯನಿಕ ದಾಳಿಯಂತಹ ಸಂದರ್ಭಗಳಲ್ಲೂ ರಕ್ಷಣಾ ವ್ಯವಸ್ಥೆಗಳಿವೆ ಎಂದು ಹೇಳಲಾಗುತ್ತದೆ. ಆದರೆ ರಾಷ್ಟ್ರಾಧ್ಯಕ್ಷರ ವಾಹನಗಳ ನಿಖರ ಭದ್ರತಾ ಸಾಮರ್ಥ್ಯದ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲ.

ಭದ್ರತೆಯ ಜತೆಗೆ ಐಷಾರಾಮಿ ಸೌಲಭ್ಯಗಳಿಗೂ ಆದ್ಯತೆ ನೀಡಲಾಗಿದೆ. ಪ್ರೀಮಿಯಂ ಲೆದರ್ ಆಸನಗಳು, ವುಡ್ ಫಿನಿಷ್, ದೊಡ್ಡ ಸ್ಕ್ರೀನ್‌ಗಳು, ಪ್ರೈವಸಿ ಡಿವೈಡರ್, ಆಸನಗಳ ಹೀಟಿಂಗ್-ಕೂಲಿಂಗ್ ಹಾಗೂ ಮಸಾಜ್ ಸೌಲಭ್ಯಗಳು ಕಾರಿನಲ್ಲಿವೆ.

ವಿದೇಶ ಪ್ರವಾಸಗಳ ಸಂದರ್ಭದಲ್ಲೂ ಪುಟಿನ್ ಅವರ ಅಧಿಕೃತ ಕಾರನ್ನು ಅವರ ಕಾಫಿಲಿನೊಂದಿಗೆ ಕರೆದೊಯ್ಯಲಾಗುತ್ತದೆ. 2025ರಲ್ಲಿ ಚೀನಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟಿನ್ ಅವರೊಂದಿಗೆ ಔರಸ್ ಸೆನೆಟ್‌ನಲ್ಲಿ ಪ್ರಯಾಣಿಸಿದ್ದರು.

ಜಿನ್ ಪಿಂಗ್ ಅವರ ಹಾಂಗ್ಕಿ N701

ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರ ಅಧಿಕೃತ ಕಾಫಿಲಿನಲ್ಲಿ ಹಾಂಗ್ಕಿ N701 ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ‘ಹಾಂಗ್ಕಿ’ ಎಂಬ ಚೀನೀ ಪದದ ಅರ್ಥ ‘ಕೆಂಪು ಧ್ವಜ’. 1958ರಲ್ಲಿ ಆರಂಭವಾದ ಈ ಬ್ರ್ಯಾಂಡ್ ಚೀನಾದ ಉನ್ನತ ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳೊಂದಿಗೆ ದೀರ್ಘಕಾಲದಿಂದ ಗುರುತಿಸಿಕೊಂಡಿದೆ.

N701 ಸಾಮಾನ್ಯ ಗ್ರಾಹಕರಿಗಾಗಿ ತಯಾರಿಸಲಾದ ಕಾರಲ್ಲ. ಇದು ವಿಶೇಷ ಅಧ್ಯಕ್ಷೀಯ ಲಿಮೋಸಿನ್ ಆಗಿದ್ದು, ಸಾಮಾನ್ಯ ಡೀಲರ್‌ಶಿಪ್‌ಗಳಲ್ಲಿ ಖರೀದಿಸಲು ಸಾಧ್ಯವಿಲ್ಲ. 2022ರಲ್ಲಿ ಜಿನ್ ಪಿಂಗ್ ಅವರ ಹಾಂಗ್‌ಕಾಂಗ್ ಭೇಟಿಯ ಸಂದರ್ಭದಲ್ಲಿ ಈ ಕಾರು ಮೊದಲ ಬಾರಿಗೆ ಸಾರ್ವಜನಿಕ ಗಮನ ಸೆಳೆದಿತ್ತು. ಬಳಿಕ ಅವರ ವಿದೇಶ ಪ್ರವಾಸಗಳಲ್ಲೂ N701 ಕಾಣಿಸಿಕೊಂಡಿದೆ.

N701ರ ಭದ್ರತೆ ಇನ್ನೂ ರಹಸ್ಯ

ಹಾಂಗ್ಕಿ N701ರ ಭದ್ರತಾ ವ್ಯವಸ್ಥೆಗಳ ನಿಖರ ವಿವರಗಳನ್ನು ಚೀನಾ ಸರ್ಕಾರ ಬಹಿರಂಗಪಡಿಸಿಲ್ಲ. ಆರ್ಮರ್ ಪ್ಲೇಟ್‌ನ ದಪ್ಪ, ಗಾಜಿನ ರಕ್ಷಣಾ ಮಟ್ಟ, ಸ್ಫೋಟ ಅಥವಾ ಇತರ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಎಂಜಿನ್ ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳೂ ಸಂಪೂರ್ಣವಾಗಿ ಬಹಿರಂಗವಾಗಿಲ್ಲ.

N701ರಲ್ಲಿ V8 ಅಥವಾ V12 ಎಂಜಿನ್ ಇರಬಹುದು ಎಂಬ ವರದಿಗಳಿದ್ದರೂ, ಇವುಗಳನ್ನು ಅಧಿಕೃತ ತಾಂತ್ರಿಕ ಮಾಹಿತಿಯೆಂದು ಪರಿಗಣಿಸಲಾಗುವುದಿಲ್ಲ. ಅಧ್ಯಕ್ಷರ ಭದ್ರತಾ ವಾಹನದ ಸಂಪೂರ್ಣ ತಾಂತ್ರಿಕ ಸಾಮರ್ಥ್ಯವನ್ನು ರಹಸ್ಯವಾಗಿಡುವುದು ಭದ್ರತಾ ದೃಷ್ಟಿಯಿಂದ ಸಹಜವಾಗಿದೆ.

ವಿಶಾಲವಾದ ಬಾಡಿ, ದೊಡ್ಡ ಮುಂಭಾಗದ ಗ್ರಿಲ್, ಕ್ರೋಮ್ ಫಿನಿಷ್ ಹಾಗೂ ವಿಶಾಲ ಹಿಂಭಾಗದ ಕ್ಯಾಬಿನ್ N701ರ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳಾಗಿವೆ. ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಅಧಿಕೃತ ಧ್ವಜಗಳನ್ನು ಅಳವಡಿಸಲು ಮುಂಭಾಗದ ಫೆಂಡರ್‌ನಲ್ಲಿ ವಿಶೇಷ ವ್ಯವಸ್ಥೆಯೂ ಇದೆ.