ನ.1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ರಿಟರ್ನ್ಸ್ ನಿಯಮಗಳಲ್ಲಿ ಆಗಲಿವೆ ಬದಲಾವಣೆಗಳು

ನವದೆಹಲಿ: ನವೆಂಬರ್ 1 ರಿಂದ ವಿಮಾ ಪಾಲಿಸಿ, ಅಡುಗೆ ಅನಿಲ ಮತ್ತು ಜಿ.ಎಸ್.ಟಿ ಗಳ ನಿಯಮಗಳು ಬದಲಾಗಲಿವೆ. ಈ ನಿಯಮಗಳು ಸಾಮಾನ್ಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಮತ್ತು ಇವುಗಳಲ್ಲಿ ಹೆಚ್ಚಿನವನ್ನು ಗ್ರಾಹಕರ ಅನುಕೂಲತೆಗಾಗಿ ಮಾಡಲಾಗಿದೆ.

1. ಜೀವವಿಮಾ ಪಾಲಿಸಿಗೆ ಕೆವೈಸಿ ಕಡ್ಡಾಯ

ವಿಮಾ ನಿಯಂತ್ರಕ ಐ.ಆರ್.ಡಿ.ಎ.ಐ ಜೀವೇತರ(ನಾನ್-ಲೈಫ್) ವಿಮಾ ಪಾಲಿಸಿಗಳನ್ನು ಖರೀದಿಸಲು ಕೈವೈಸಿ ಅನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಜೀವ ವಿಮೆಗೆ ಮತ್ತು ಆರೋಗ್ಯ ಮತ್ತು ವಾಹನ ವಿಮೆಯಂತಹ ಜೀವೇತರ ವಿಮೆಯ ಸಂದರ್ಭದಲ್ಲಿ, ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಕ್ಲೈಮ್‌ಗಳ ಸಂದರ್ಭದಲ್ಲಿ ಇದು ಕಡ್ಡಾಯವಾಗಿತ್ತು. ಆದರೆ ನವೆಂಬರ್ 1 ರಿಂದ ಎಲ್ಲ ರೀತಿಯ ವಿಮೆಗೂ ಇದು ಕಡ್ಡಾಯವಾಗಲಿದೆ.

2. ಒಟಿಪಿ ನೀಡಿದ ಬಳಿಕವಷ್ಟೆ ಸಿಲಿಂಡರ್ ವಿತರಣೆ

ನ. 1 ರಿಂದ ಅಡುಗೆ ಅನಿಲ ಸಿಲಿಂಡರ್ ಅನ್ನು ಬುಕ್ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದೆ. ಗ್ಯಾಸ್ ವಿತರಣೆಯ ಸಮಯದಲ್ಲಿ ಗ್ರಾಹಕರು ತಮ್ಮ ಮೊಬೈಲಿಗೆ ಬಂದ ಒಟಿಪಿ ಅನ್ನು ನೀಡಿ ಸಿಲಿಂಡರ್ ಅನ್ನು ಪಡೆಯಬಹುದು.

3. ಜಿ.ಎಸ್.ಟಿ ರಿಟರ್ನ್‌ಗಾಗಿ ನಾಲ್ಕು-ಅಂಕಿಯ ಎಚ್‌ಎಸ್‌ಎನ್ ಕೋಡ್ ಅವಶ್ಯ

ಜಿಎಸ್‌ಟಿ ರಿಟರ್ನ್ಸ್‌ನ ನಿಯಮಗಳಿಗೆ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈಗ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ತೆರಿಗೆದಾರರು ಜಿಎಸ್‌ಟಿ ರಿಟರ್ನ್‌ನಲ್ಲಿ ನಾಲ್ಕು ಅಂಕಿಗಳ ಎಚ್‌ಎಸ್‌ಎನ್ ಕೋಡ್ ಅನ್ನು ಬರೆಯುವುದು ಕಡ್ಡಾಯವಾಗಲಿದೆ. ಈ ಮೊದಲು, ಎರಡು ಅಂಕಿಗಳ ಎಚ್‌ಎಸ್‌ಎನ್ ಕೋಡ್ ಅನ್ನು ನಮೂದಿಸಬೇಕಾಗಿತ್ತು.

ಈ ಮೊದಲು, 5 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ತೆರಿಗೆದಾರರು ಏಪ್ರಿಲ್ 1, 2022 ರಿಂದ ನಾಲ್ಕು-ಅಂಕಿಯ ಕೋಡ್ ಅನ್ನು ಮತ್ತುಆಗಸ್ಟ್ 1, 2022 ರಿಂದ ಆರು-ಅಂಕಿಯ ಕೋಡ್ ಅನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.

ನವೆಂಬರ್ 1 ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಗಳ ಪರಿಷ್ಕರಣೆ ನಡೆದಿದ್ದು, ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 115 ರೂ ಕಡಿತಗೊಳಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್ ಗಳ ಬೆಲೆ ಯಥಾಸ್ಥಿತಿಯಲ್ಲಿದೆ.