ಕುಂದಾಪುರ: ಹಿಂದೂ ರುದ್ರಭೂಮಿಯಲ್ಲಿ ಸಾರ್ವಜನಿಕ ತೆರೆದ ಬಾವಿ ನಿರ್ಮಾಣ: ಸ್ಥಳೀಯರಿಂದ ಭಾರೀ ವಿರೋಧ

ಕುಂದಾಪುರ: ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ಇಲ್ಲಿನ ಹೆಮ್ಮಾಡಿ ಸಮೀಪದ ಸಂತೋಷನಗರ ಹಿಂದೂ ರುದ್ರಭೂಮಿ ಆವರಣದೊಳಗೆ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ತೆರೆದ ಬಾವಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಮ್ಮಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ತೆರೆದ ಬಾವಿಗೆ ಇದೀಗ ಅಪಸ್ವರಗಳು ಎದ್ದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ಸೋಮವಾರ ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆಯಲ್ಲಿ ಗ್ರಾ.ಪಂ ಪಿಡಿಓ ಮಂಜು ಬಿಲ್ಲವ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರೂ ಪಟ್ಟು ಬಿಡದ ಸ್ಥಳೀಯರು ಕಾಮಗಾರಿಯನ್ನು ನಿಲ್ಲಿಸದಿದ್ದರೆ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.

ಹೆಮ್ಮಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಇರುವುದೊಂದೆ ಹಿಂದೂ ರುದ್ರಭೂಮಿ. ಈಗಾಗಲೇ ಇದೇ ಸ್ಥಳದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಇದೀಗ ತೆರೆದ ಬಾವಿ ನಿರ್ಮಿಸಿದರೆ ಇನ್ನಷ್ಟು ಜಾಗ ಚಿಕ್ಕದಾಗುತ್ತದೆ. ಹಿಂದೂ ರುದ್ರಭೂಮಿಯನ್ನು ಅಭಿವೃದ್ದಿಪಡಿಸುವುದನ್ನು ಬಿಟ್ಟು ಈ ರೀತಿಯಾಗಿ ಸ್ಥಳೀಯರಿಗೆ ಮಾಹಿತಿ ನೀಡದೆ ಏಕಾಏಕಿ ತೆರೆದ ಬಾವಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ತೆರೆದ ಬಾವಿ ನಿರ್ಮಾಣಕ್ಕೆ ನಮ್ಮ ಆಕ್ಷೇಪವಿಲ್ಲ. ಬೇರೆ ಕಡೆಗಳಲ್ಲಿ ಬಾವಿ ನಿರ್ಮಿಸಿ. ಆದರೆ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಬಾವಿ ನಿರ್ಮಿಸಲು ನಾವು ಬಿಡೋದಿಲ್ಲ ಎಂದು ಸ್ಥಳೀಯ ನಿವಾಸಿ ಜನಾರ್ದನ ಪೂಜಾರಿ ಎಚ್ಚರಿಸಿದರು.

ಕಾಮಗಾರಿಗೆ ತಾತ್ಕಾಲಿಕ ತಡೆ:
ಸದ್ಯ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತೆರೆದ ಬಾವಿ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು, ಪಂಚಾಯತ್ ಸಾಮಾನ್ಯ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪಿಡಿಓ ಮಂಜು ಬಿಲ್ಲವ ಭರವಸೆ ನೀಡಿದರು.

ಈ ವೇಳೆಯಲ್ಲಿ ಸ್ಥಳೀಯರಾದ ಜನಾರ್ದನ ಪೂಜಾರಿ, ರತ್ನಾಕರ ಭಂಡಾರಿ, ಪ್ರಶಾಂತ ಪೂಜಾರಿ ಪಡುಮನೆ, ಉಮೇಶ್ ಮೊಗವೀರ, ರವಿ ಮೊಗವೀರ, ಆನಂದ ಪಡುಮನೆ, ಆಶಾ ಆನಂದ, ಸತೀಶ್ ದೇವಾಡಿಗ ಗುಡ್ಡಿಮನೆ ಮೊದಲಾದವರು ಇದ್ದರು.

ಜಿ.ಪಂ ಸದಸ್ಯೆ ಭೇಟಿ:
ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ ಸದಸ್ಯೆ ಶೋಭಾ ಜಿ ಪುತ್ರನ್, ಹೆಮ್ಮಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಆಗಾಗೆ ಈ ಬಗ್ಗೆ ಹೆಮ್ಮಾಡಿ ಪಂಚಾಯತ್ ನನ್ನ ಗಮನಕ್ಕೆ ತರುತ್ತಲೇ ಬಂದಿದೆ. ಇದೀಗ ಏಳು ಲಕ್ಷ ರೂ ಅನುದಾನದಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಸ್ಥಳ ಗುರುತಿಸುವಿಕೆ ಪಂಚಾಯತ್ ಮಾಡಿದೆ. ಆದರೆ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಬಾವಿ ನಿರ್ಮಿಸುತ್ತಿರುವುದು ಇದೀಗ ನನ್ನ ಗಮನಕ್ಕೆ ಬಂದಿದೆ. ಸ್ಥಳೀಯರ ಭಾವನೆಗಳನ್ನೂ ನಾವು ಹುಸಿಗೊಳಿಸಬಾರದು. ಯಾರಿಗೂ ತೊಂದರೆಯಾಗದಂತೆ ಪಂಚಾಯತ್ ಬಾವಿ ನಿರ್ಮಾಣಕ್ಕೆ ಸ್ಥಳ ಗುರುತಿಸಲಿ. ನಾನೂ ಕೂಡ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

ಸಾರ್ವಜನಿಕ ಹಿಂದೂ ರುಧ್ರಭೂಮಿಯನ್ನು ಅಭಿವೃದ್ದಿಪಡಿಸುವುದನ್ನೇ ಪಮಚಾಯತ್ ಮರೆತಂತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಿಂದೂ ರುಧ್ರಭೂಮಿ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಈಗಾಗಲೇ ಇದೇ ಸ್ಥಳದಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ಇದೀಗ ಬಾವಿ ನಿರ್ಮಾಣಕ್ಕೆ ಪಂಚಾಯತ್ ಮುಂದಾಗಿದೆ. ಸಾರ್ವಜನಿಕ ಹಿಂದೂ ರುಧ್ರಭೂಮಿಯಲ್ಲಿ ಬಾವಿ ನಿರ್ಮಾಣಕ್ಕೆ ನಾವು ಅವಕಾಶ ಮಾಡಿಕೊಡೋದಿಲ್ಲ.

–ಜನಾರ್ದನ್ ಪೂಜಾರಿ, ಸ್ಥಳೀಯ ನಿವಾಸಿ