ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಿದ ಖಾಸಗಿ ಬಸ್ ಗಳ ವಿರುದ್ಧ RTO ಕಾರ್ಯಾಚರಣೆ: ರಾಜ್ಯದಲ್ಲಿ ಒಟ್ಟು 3,756 ಪ್ರಕರಣ ದಾಖಲು

ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ಆರೋಪದ ಮೇರೆಗೆ ಖಾಸಗಿ ಬಸ್‌ಗಳ ವಿರುದ್ಧ ಆರ್‌ಟಿಒ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ.

ಸೆಪ್ಟೆಂಬರ್ 11ರಿಂದ 15ರವರೆಗೆ ನಡೆದ ಐದು ದಿನಗಳ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಒಟ್ಟು 14,987 ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 3,756 ಪ್ರಕರಣಗಳನ್ನು ದಾಖಲಿಸಲಾಗಿದ್ದು, 33 ಬಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಪರವಾನಗಿ ನಿಯಮ ಉಲ್ಲಂಘನೆ, ತೆರಿಗೆ ಪಾವತಿಸದೆ ಸಂಚರಿಸುವುದು ಹಾಗೂ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಸೇರಿದಂತೆ ವಿವಿಧ ಪ್ರಕರಣಗಳು ತಪಾಸಣೆ ವೇಳೆ ಪತ್ತೆಯಾಗಿವೆ. ಅಂತಾರಾಜ್ಯ ಬಸ್‌ಗಳನ್ನೂ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು ₹73.6 ಲಕ್ಷ ಹಣ ವಸೂಲಿ ಮಾಡಲಾಗಿದೆ. ಇದರಲ್ಲಿ ₹40.3 ಲಕ್ಷ ದಂಡದ ಮೊತ್ತವಾಗಿದ್ದು, ಉಳಿದ ಮೊತ್ತ ವಿವಿಧ ಶುಲ್ಕ ಹಾಗೂ ಇತರೆ ವಸೂಲಿಗಳಿಂದ ಸಂಗ್ರಹವಾಗಿದೆ.

ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ದರ ವಸೂಲಿ ಕುರಿತು ಪ್ರಯಾಣಿಕರಿಂದ ಬಂದ ದೂರುಗಳನ್ನು ಆಧರಿಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸುವ ಖಾಸಗಿ ಬಸ್‌ಗಳ ವಿರುದ್ಧ ಮುಂದೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಲಾಗಿದೆ.