903 ಕೋಟಿ ರೂಪಾಯಿ ಹೂಡಿಕೆ ವಂಚನೆ ಭೇದಿಸಿದ ತೆಲಂಗಾಣ ಪೊಲೀಸರು: ವಂಚನೆಗೆ ಚೀನಾ-ದುಬೈ ನಂಟು

ಹೈದರಾಬಾದ್: ಬಹುಕೋಟಿ ಹೂಡಿಕೆ ವಂಚನೆಯನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬುಧವಾರ ಭೇದಿಸಿದ್ದು, ಇಬ್ಬರು ಚೀನಾ ಪ್ರಜೆಗಳು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಪ್ರಕಾರ, ಹೂಡಿಕೆ ವಂಚನೆಯ ಮೊತ್ತ 903 ಕೋಟಿ ರೂಗಳಾಗಿವೆ. ವಂಚನೆಯು ದುಬೈ, ಚೀನಾ ಮತ್ತು ಕಾಂಬೋಡಿಯಾ ಜೊತೆ ಸಂಪರ್ಕ ಹೊಂದಿದ್ದು, ಭಾರತದಾದ್ಯಂತ ಹರಡಿದೆ.

ಮಹತ್ವದ ಪ್ರಗತಿಯಲ್ಲಿ, ಹೈದರಾಬಾದ್ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ಕಾಂಬೋಡಿಯಾ, ದುಬೈ ಮತ್ತು ಚೀನಾದಲ್ಲಿ ಸಂಪರ್ಕ ಹೊಂದಿರುವ 903 ಕೋಟಿ ರೂಪಾಯಿ ಹೂಡಿಕೆ ವಂಚನೆಯಲ್ಲಿ ತೊಡಗಿರುವ ಬಹುರಾಷ್ಟ್ರೀಯ ಗ್ಯಾಂಗ್ ಅನ್ನು ಭೇದಿಸಿದೆ. ದುಷ್ಕರ್ಮಿಗಳು ನಕಲಿ ಹೂಡಿಕೆ ಅಪ್ಲಿಕೇಶನ್‌ಗಳ ಮೂಲಕ ಹೂಡಿಕೆದಾರಿಗೆ ಆಮಿಷವೊಡ್ಡಿ ಮೋಸ ಮಾಡಿದ್ದಾರೆ ಮತ್ತು ಹಣವನ್ನು ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ಕಮಿಷನರ್ ಆನಂದ್ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳು ಅಧಿಕೃತ ಹಣ ಬದಲಾವಣೆ ನಡೆಸುವವರು ಮತ್ತು ಅವರು ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅವರು ಹೇಳಿದರು.

ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸರ ಪ್ರಕಾರ, ಈ ಕಾಲ್ ಸೆಂಟರ್‌ಗಳು ರಾಷ್ಟ್ರ ರಾಜಧಾನಿಯನ್ನು ಹೊರತುಪಡಿಸಿ ದೇಶದ ಇತರ ಸ್ಥಳಗಳಿಂದಲೂ ಕಾರ್ಯನಿರ್ವಹಿಸುತ್ತಿವೆ.

ಸೈಬರ್ ಕ್ರೈಂ ಪೊಲೀಸರು ದೆಹಲಿ ಮತ್ತು ಇತರ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕೆಲವು ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಜನರಿಗೆ ಕಮಿಷನ್ ಪಾವತಿಸುವ ಮೂಲಕ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಹೂಡಿಕೆದಾರರನ್ನು ವಂಚಿಸುತ್ತಿದ್ದ ನಕಲಿ ಹೂಡಿಕೆ ಕಂಪನಿಗಳ ಜಾಲವನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.