ಬೆಳಗಾವಿ: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯನ್ನು ಘೋಷಿಸಿದ್ದು, ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಪ್ರತೀ ತಿಂಗಳು 2000 ರೂ ನೀಡುವ ಭರವಸೆ ನೀಡಿತ್ತು. ಆದರೆ ಇದೀಗ ಈ ಯೋಜನೆಯನ್ವಯ 2000 ರೂ ಪಡೆಯಲು ಅತ್ತೆ-ಸೊಸೆಯರಲ್ಲಿ ತಿಕ್ಕಾಟ ನಡೆಯುತ್ತಿರುವ ಪ್ರಸಂಗಗಳು ವರದಿಯಾಗುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಣಾಳಿಕೆಯಲ್ಲಿ ಸ್ಪಷ್ಟತೆಯ ಕೊರತೆ ಇದ್ದು, ಕುಟುಂಬದ ಯಜಮಾನಿಯಾದ ಮಹಿಳೆಗೆ ಮಾತ್ರ ಪ್ರತೀ ತಿಂಗಳು 2000 ರೂ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು. ಯೋಜನೆಯ ಅನುಷ್ಠಾನಕ್ಕೂ ಮುನ್ನವೇ ಹಣ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಗೊಂದಲಗಳಾಗುತ್ತಿವೆ ಎನ್ನಲಾಗಿದೆ.
ಮಂಗಳವಾರದಂದು ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಯಾರ ಕೈ ಸೇರಬೇಕು ಎನ್ನುವ ನಿರ್ಧಾರವು ಕುಟುಂಬಗಳಿಗೆ ಬಿಟ್ಟಿದ್ದು ಎಂದರು. ಆ ಬಳಿಕ ಸ್ಪಷ್ಟನೆ ನೀಡಿದ ಅವರು, ಭಾರತೀಯ ಪರಂಪರೆಯಲ್ಲಿ ಮನೆಯ ಹಿರಿಯ ಸದಸ್ಯೆಯಾಗಿರುವ ಅತ್ತೆಯೆ ಮನೆಯ ಯಜಮಾನಿಯಾಗಿರುವುದರಿಂದ ಹಣವು ಅತ್ತೆಗೆ ಸೇರಬೇಕಿದ್ದು, ಆಕೆಗೆ ಮನಸ್ಸಿದ್ದಲ್ಲಿ ಅದನ್ನು ಸೊಸೆಯ ಜೊತೆ ಹಂಚಿಕೊಳ್ಳಬಹುದು ಎಂದರು.
ಯೋಜನೆ ಅನುಷ್ಠಾನದಲ್ಲಿ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಈಗಲೇ ಮಾತನಾಡಲು ಕಷ್ಟವಾಗಿದ್ದು, ಇಲಾಖೆಯು ಅನುಷ್ಠಾದ ವಿಧಾನಗಳ ಬಗ್ಗೆ ಚರ್ಚಿಸಬೇಕಾಗಿದೆ. ಗುರುವಾರದ ಸಚಿವ ಸಂಪುಟ ಸಭೆಯ ನಂತರ ಸ್ಪಷ್ಟತೆ ಸಿಗಲಿದೆ ಎಂದು ಅವರು ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕೂಡಾ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಈ ಹಣವು ಅತ್ತೆ-ಸೊಸೆ ಇಬ್ಬರ ಮಧ್ಯೆಯೂ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವುದು ಮಹಿಳಾ ಪರ ಸಂಘಟನೆಗಳ ಕಾರ್ಯಕರ್ತೆಯರ ಅಭಿಪ್ರಾಯವಾಗಿದ್ದು, ಇದರಿಂದ ಕುಟುಂಬದಲ್ಲಿ ಕಿತ್ತಾಟ ನಡೆಯುವುದು ತಪ್ಪಲಿದೆ ಎಂದಿದ್ದಾರೆ ಎಂದು ಟಿಒಐ ವರದಿ ಹೇಳಿದೆ.