ಕಮಲಾಕ್ಷಿ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿದ ಆರ್ಥಿಕ ಹಗರಣ: ಕಚೇರಿಗೆ ಗ್ರಾಹಕರಿಂದ ಘೇರಾವ್

ಉಡುಪಿ: ನಗರದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ದ100 ಕೋಟಿಗೂ ಮಿಕ್ಕಿದ ಆರ್ಥಿಕ ಹಗರಣದ ಆರೋಪ ಕೇಳಿಬಂದಿದೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 100 ಕೋಟಿಗೂ ಮಿಕ್ಕಿದ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.

ಸಹಕಾರ ಸಂಘದಲ್ಲಿ ನಗರದ ಸಾರ್ವಜನಿಕರು ಹಣವನ್ನು ಠೇವಣಿ ಇಟ್ಟಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಯಾವುದೇ ಬಡ್ಡಿಯನ್ನು ನೀಡಲಾಗಿಲ್ಲ ಎಂದು ವರದಿಯಾಗಿದೆ. ಬೇಸತ್ತ ಗ್ರಾಹಕರು ತಾವೇ ಖುದ್ದಾಗಿ ನಗರದ ಸಂಸ್ಕೃತ ಕಾಲೇಜಿನ ಮುಂಭಾಗದ ಸೊಸೈಟಿಯ ಕಚೇರಿಗೆ ಬಂದು ಘೇರಾವ್ ಹಾಕಿ ಅಲ್ಲಿನ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಬ್ಯಾಂಕಿನ ಮುಖ್ಯಸ್ಥ ಬಿ. ವಿ.ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಅವಮಾನ ತಾಳಲಾರದೆ ಕಣ್ಣೀರಿಡುತ್ತಾ ತನ್ನ ಬ್ಯಾಗ್ ನಲ್ಲಿದ್ದ ಕೆಲವು ಮಾತ್ರೆಯನ್ನು ಬಾಯಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಠೇವಣಿದಾರರು ಆಕೆಯನ್ನು ತಡೆದು ಬಾಯಿಯಲ್ಲಿದ್ದ ಮಾತ್ರೆಯನ್ನು ಹೊರತೆಗೆಯುವ ಮೂಲಕ ಅನಾಹುತವೊಂದನ್ನು ತಪ್ಪಿಸಿದರು. ಠೇವಣಿದಾರರು ಸಂಘದ ಅಧ್ಯಕ್ಷರ ವಿರುದ್ದ ಧಿಕ್ಕಾರ ಕೂಗಿ ತಕ್ಷಣವೇ ಕಚೇರಿಗೆ ಬರುವಂತೆ ಪಟ್ಟುಹಿಡಿದರು.

 

ಸಾರ್ವಜನಿಕರು ಉಳಿತಾಯ ಮಾಡಿರುವ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದು, ಅವರಿಗೆ ಬಡ್ಡಿ ನೀಡದೆ ಸತಾಯಿಸಿದ್ದಲ್ಲದೆ ಇದೀಗ ಬ್ಯಾಂಕ್ ಮುಖ್ಯಸ್ಥ ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನಾತ್ಮಕವಾಗಿ ದೂರು ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಠೇವಣಿದಾರರು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.