ವಿಶ್ವದಾದ್ಯಂತ ಸದ್ದು ಮಾಡಿ, ದೊಡ್ಡ ಮಟ್ಟಿನ ಯಶಸ್ಸಿಗೆ ಸಾಕ್ಷಿಯಾದ ಸಿನಿಮಾ. ಎಸ್‌ಎಸ್ ರಾಜಮೌಳಿ ನಿರ್ದೇಶನ ಅದ್ಭುತ ನಿರ್ದೇಶನ ಶೈಲಿ, ರಾಮ್ ಚರಣ್ – ಜೂ. ಎನ್ಟಿಆರ್ ಅಮೋಘ ಅಭಿನಯದ ಕಾಂಬಿನೇಶನ್ನಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ
‘ಆರ್‌ಆರ್‌ಆರ್’ ಭಾರತದ ಬ್ಲಾಕ್ಬಸ್ಟರ್ ಸಿನಿಮಾ. 2022ರಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಸೂಪರ್ ಹಿಟ್ ಚಿತ್ರ.ಆರ್‌ಆರ್‌ಆರ್ ಸೀಕ್ವೆಲ್ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸಂಭವನೀಯ ಸೀಕ್ವೆಲ್… ಈ ವರ್ಷದ ಆರಂಭದಲ್ಲಿ ವಿಶ್ವ ಶ್ರೇಷ್ಠ ಆಸ್ಕರ್ ವೇದಿಕೆಯಲ್ಲಿ ಆರ್‌ಆರ್‌ಆರ್ ಗೆಲುವು ಸಾಧಿಸಿದ್ದು, ಸದ್ಯ ಸಂಭವನೀಯ ಸೀಕ್ವೆಲ್ ಬಗ್ಗೆ ಸಾಕಷ್ಟು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಆದರೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಆಗಲಿ ಸಿನಿಮಾದ ನಾಯಕ ನಟರಾಗಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ ಹೊರಹಾಕಿಲ್ಲ. ಚಿತ್ರದ ಬರಹಗಾರ ವಿಜಯೇಂದ್ರ ಪ್ರಸಾದ್ ಆಫ್ರಿಕಾದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳನ್ನು ಆಧರಿಸಿದ ಸೀಕ್ವೆಲ್ ಬಗ್ಗೆ ಸುಳಿವು ನೀಡಿದ್ದಾರೆ.
ಆರ್‌ಆರ್‌ಆರ್ 2: ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ತಂದೆ ಲೇಖಕ ವಿಜಯೇಂದ್ರ ಪ್ರಸಾದ್ ಅವರಿಗೆ ಆರ್‌ಆರ್‌ಆರ್ ಸೀಕ್ವೆಲ್ ಕುರಿತು ಪ್ರಶ್ನೆ ಎದುರಾಯಿತು. ತಂದೆ ಮಗ ಆರ್‌ಆರ್‌ಆರ್ 2 ನಿರ್ಮಿಸಲು ಯೋಜಿಸುತ್ತಿದ್ದೀರಾ? ಎಂದು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಪ್ರಸಾದ್ ಅವರು, ”ಹೌದು ಮತ್ತು ಇಲ್ಲ” ಎಂದು ಉತ್ತರಿಸಿದರು.
2022ರ ನವೆಂಬರ್ನಲ್ಲಿ ರಾಜಮೌಳಿ ಅವರು ಆರ್‌ಆರ್‌ಆರ್ 2 ನಿರ್ದೇಶಿಸಲು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದರು. ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೇ, ರಾಜಮೌಳಿ ಅವರು ತಮ್ಮ ತಂದೆಯೊಂದಿಗೆ ಸಂಭವನೀಯ ಸೀಕ್ವೆಲ್ ಬಗ್ಗೆ ಚರ್ಚೆ ನಡೆಸಿದ್ದೇನೆ. ತಂದೆ ಪ್ರಸ್ತುತ ಸ್ಕ್ರಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇನ್ನೂ ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಅಭಿನಯದ ಆಯಕ್ಷನ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.
2022 ರಲ್ಲಿ ಆರ್‌ಆರ್‌ಆರ್ ಯಶಸ್ಸು ಕಂಡ ಬಳಿಕ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ತಮ್ಮ ಮಗನೊಂದಿಗೆ (ನಿರ್ದೇಶಕ) ಮುಂದಿನ ಭಾಗದ ಕಲ್ಪನೆ ಹಂಚಿಕೊಂಡರು. ಕಥೆ ಆಫ್ರಿಕಾದಲ್ಲಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ್ (ಜೂನಿಯರ್ ಎನ್ಟಿಆರ್) ಪಾತ್ರಗಳೊಂದಿಗೆ ಮುಂದುವರಿಯುತ್ತದೆ ಎಂಬ ಐಡಿಯಾ ಮಗನೊಂದಿಗೆ ಶೇರ್ ಮಾಡಿದರು. ನಿರ್ದೆಶಕ ರಾಜಮೌಳಿ ಅವರೂ ಕೂಡ ಈ ಐಡಿಯಾ ಇಷ್ಟಪಟ್ಟಿದ್ದಾರೆ ಮತ್ತು ಸಂಪೂರ್ಣ ಸ್ಕ್ರಿಪ್ಟ್ ಅನ್ನು ಅಭಿವೃದ್ಧಿಪಡಿಸಲು ಮಗನಲ್ಲಿ ಕೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಲೇಖಕ ವಿಜಯೇಂದ್ರ ಪ್ರಸಾದ್ ಹಂಚಿಕೊಂಡಿದ್ದಾರೆ.
ರಾಜಮೌಳಿ ಅವರು ಪ್ರಸ್ತುತ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮುಂಬರುವ ತಮ್ಮ ಈ ಯೋಜನೆ ಪೂರ್ಣಗೊಳಿಸಿದ ನಂತರ ಬೇರೆ ಸಿನಿಮಾ ಬಗ್ಗೆ ಯೋಚಿಸುತ್ತಾರೆ ಎಂದು ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ. ಇಬ್ಬರೂ ನಟರಿಗೆ ಸ್ಕ್ರಿಪ್ಟ್ ಇಷ್ಟವಾದಲ್ಲಿ, ಅವರಿಗೆ ಸಮಯವಿದ್ದರೆ ರಾಜಮೌಳಿ ಈ ಕಥೆಯ ಮೇಲೆ ಕೆಲಸ ಮಾಡಲಿದ್ದಾರೆ ಎಂದು ಸಹ ತಿಳಿಸಿದ್ದಾರೆ.












