ಬೆಂಗಳೂರು: ಆರ್ ಆರ್ ನಗರ ಕ್ಷೇತ್ರದ ಉಪಚುನಾವಣೆಗೆ ಎರಡು ದಿನ ಬಾಕಿ ಉಳಿದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಗೆಲುವಿಗೆ ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ಚುನಾವಣಾ ಪ್ರಚಾರದ ವೇಳೆ ಡಿಕೆಶಿ ಶ್ರೀರಾಮನ ಜಪ ಮಾಡಿ ಗಮನಸೆಳೆದರು.
ಹಿಂದೂ ಜಾಗೃತ ಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಅವರು, ‘ಜೈ ಶ್ರೀರಾಮ್’ ಎಂಬ ಘೋಷಣೆ ಮೊಳಗಿಸಿದರು. ಅವರು ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಅಭಿಮಾನಿಗಳು ಸಹ ಧ್ವನಿಗೂಡಿಸಿದರು.
ಹಿಂದುತ್ವ ಬಿಜೆಪಿಯ ಆಸ್ತಿಯಲ್ಲ. ನಾನು ಕೂಡ ಶಿವ, ರಾಮ, ಆಂಜನೇಯ ಭಕ್ತ. ಆದರೆ ನಾವು ಜಾತ್ಯತೀತ ತತ್ವದಡಿ ನಡೆಯುತ್ತಿದ್ದೇವೆ. ಇದು ಬೇಡವೆಂದರೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ದೇಶದಲ್ಲಿರುವ ಚರ್ಚ್, ಮಸೀದಿಗಳನ್ನು ಮುಚ್ಚಲಿ ಎಂದು ಸವಾಲು ಹಾಕಿದರು.