ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್ ಆರ್ ನಗರ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಧ್ಯೆ ಒಮ್ಮತದ ನಿರ್ಣಯ ಮೂಡದ ಕಾರಣ ಇಬ್ಬರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ರವಾನಿಸಲಾಗಿದೆ.
ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಬಿಎಸ್ ವೈ ಹಾಗೂ ನಳಿನ್ ಮಧ್ಯೆ ಆರಂಭಿಕ ಹಂತದಲ್ಲೇ ಗೊಂದಲ ಉಂಟಾಗಿದೆ. ಮುನಿರತ್ನ ನಾಯ್ಡು ಪರ ಬಿಎಸ್ ವೈ ನಿಂತರೆ, ತುಳಸೀ ಮುನಿರಾಜು ಪರ ನಳಿನ್ ಕುಮಾರ್ ನಿಂತಿದ್ದಾರೆ ಎನ್ನಲಾಗಿದೆ.
ಎರಡು ಉಪಚುನಾವಣೆ ಹಾಗೂ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಿ, ಹೆಸರುಗಳನ್ನು ವರಿಷ್ಠರಿಗೆ ಶಿಫಾರಸು ಮಾಡುವ ಸಲುವಾಗಿ ಬಿಜೆಪಿ ಪ್ರಮುಖರ ಸಮಿತಿ ಸಭೆ ಗುರುವಾರ ಸಂಜೆ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮುನಿರತ್ನ ಹೆಸರೊಂದನ್ನೇ ವರಿಷ್ಠರಿಗೆ ಕಳುಹಿಸಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದರು. ಆದರೆ ಇದಕ್ಕೆ ನಳಿನ್ ಒಪ್ಪದ ಕಾರಣ ಇಬ್ಬರ ಹೆಸರನ್ನು ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಚುನಾವಣಾ ಉಸ್ತುವಾರಿಗಳ ನೇಮಕ
ಶಿರಾ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಪ್ರಧಾನಕಾರ್ಯದರ್ಶಿ ಎನ್.ರವಿಕುಮಾರ್, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಿ.ಸಿ.ಮೋಹನ್, ಎ.ನಾರಾಯಣಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ತಿಪ್ಪೇಸ್ವಾಮಿ ಅವರು ಉಸ್ತುವಾರಿ. ಆರ್.ಆರ್.ನಗರಕ್ಕೆ ಅರವಿಂದ ಲಿಂಬಾವಳಿ, ಆರ್.ಅಶೋಕ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್ ಅವರನ್ನು ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.