ಬೆಂಗಳೂರು: ಕಾಂಗ್ರೆಸ್ ನಿಂದ ಗೆದ್ದು ಬಳಿಕ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿ ಸರ್ಕಾರ ರಚನೆಗೆ ಸಹಕಾರ ನೀಡಿದ್ದ ಅನರ್ಹ ಶಾಸಕ ಮುನಿರತ್ನ ಇದೀಗ ಹೊಸ ತಲೆನೋವು ಶುರುವಾಗಿದೆ.
ಆರ್.ಆರ್.ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಗೆ ಸ್ಪರ್ಧಿಸಲು ಮುನಿರತ್ನ ಸಿದ್ಧತೆ ನಡೆಸಿದ್ದಾರೆ. ಆದರೆ, ಬಿಜೆಪಿ ನಾಯಕರು ಟಿಕೆಟ್ ಕೊಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಈ ವಿಚಾರ ಮುನಿರತ್ನ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ಅವರು ಅನಿವಾರ್ಯವಾಗಿ ಜೆಡಿಎಸ್ ಬಾಗಿಲು ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿ ರಾಜ್ಯ ಘಟಕ ವರಿಷ್ಠರಿಗೆ ಕಳುಹಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತುಳಸಿ ಮುನಿರಾಜುಗೌಡ ಅವರ ಹೆಸರನ್ನೂ ಸೇರಿಸಿರುವುದರಿಂದ ಮುನಿರತ್ನ ಅವರ ಟಿಕೆಟ್ ಖಾತರಿ ಬಗ್ಗೆ ಆತಂಕ ಸೃಷ್ಟಿಯಾಗಲು ಕಾರಣ.
ಈ ಮಧ್ಯೆ ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸದೇ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾದರೆ ಮುನಿರತ್ನ ಅವರಿಗೆ ಟಿಕೆಟ್ ನೀಡುವ ಬಗ್ಗೆಯೂ ಜೆಡಿಎಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.