ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಕಾನ್‌ಸ್ಟೆಬಲ್

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಸೋಮವಾರ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಗಿನ ಜಾವ 5 ಗಂಟೆಯ ನಂತರ, ಕಾನ್ಸ್‌ಟೇಬಲ್ ತನ್ನ ಸ್ವಯಂಚಾಲಿತ ಆಯುಧದಿಂದ ಗುಂಡು ಹಾರಿಸಿ ರೈಲಿನಲ್ಲಿದ್ದ ಆರ್‌ಪಿಎಫ್ ಎಎಸ್‌ಐ ಮತ್ತು ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಾಲ್ಘರ್ ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿದೆ.

ಚೇತನ್ ಕುಮಾರ್ ಚೌಧರಿ ಅವರು ಚಲಿಸುತ್ತಿದ್ದ ರೈಲಿನಲ್ಲಿ ತಮ್ಮ ಎಸ್ಕಾರ್ಟ್ ಡ್ಯೂಟಿ ಇನ್ ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಮೇಲೆ ಗುಂಡು ಹಾರಿಸಿದ್ದಾರೆ. ಮೇಲಾಧಿಕಾರಿಯನ್ನು ಕೊಂದ ನಂತರ, ಕಾನ್‌ಸ್ಟೆಬಲ್ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರಿ ರೈಲ್ವೇ ಪೊಲೀಸರು ಮತ್ತು ಆರ್‌ಪಿಎಫ್ ಅಧಿಕಾರಿಗಳ ಸಹಾಯದಿಂದ ಮೀರಾ ರೋಡ್‌ನಲ್ಲಿ ಕಾನ್ಸ್‌ಟೇಬಲ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮುಂಜಾನೆ 5.23ಕ್ಕೆ ಜೈಪುರ ಎಕ್ಸ್‌ಪ್ರೆಸ್ ರೈಲಿನ (12956) B5 ಕೋಚ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ಜಾರಿಯಲ್ಲಿದೆ.