ಉಡುಪಿ: ಹಿರಿಯಡಕ ಪೇಟೆಯಲ್ಲಿ ಸೆ.24ರಂದು ಹಾಡು ಹಗಲಲ್ಲೇ ನಡೆದ ರೌಡಿಶೀಟರ್ ಪಡುಬಿದ್ರಿಯ ಇನ್ನಾ ನಿವಾಸಿ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕಾರ್ಕಳ ತಾಲೂಕಿನ ಮಾಳ ಸಮೀಪದ ಎಸ್.ಕೆ.ಬಾರ್ಡರ್ ಬಳಿ ಶನಿವಾರ ಬೆಳಗಿನ ಜಾವ ಬೇರೆ ಕಡೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಮಂಗಳೂರಿನ ತೋಕೂರು ನಿವಾಸಿ ಮನೋಜ್ ಕುಲಾಲ್ (37), ಮಂಗಳೂರು ಕಾಟಿಪಳ್ಳದ ಕೃಷ್ಣಾಪುರ ನಿವಾಸಿ ಚಿತ್ತರಂಜನ್ ಪೂಜಾರಿ (27), ಬಂಟ್ವಾಳ ತಾಲ್ಲೂಕಿನ ಪೊಳಲಿ ನಿವಾಸಿ ಚೇತನ್ ಅಲಿಯಾಸ್ ಚೇತು ಪಡೀಲ್ (32), ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ನಿವಾಸಿ ರಮೇಶ್ ಪೂಜಾರಿ (38) ಹಾಗೂ ಸುರತ್ಕಲ್ ಕುತ್ತೆತ್ತೂರಿನ ದೀಕ್ಷಿತ್ ಶೆಟ್ಟಿ ಯಾನೆ ದೇವಿ ಪ್ರಸಾದ್ (29) ಬಂಧಿತ ಆರೋಪಿಗಳು.
ಎಲ್ಲ ಆರೋಪಿಗಳು ರೌಡಿಶೀಟರ್:
ಆರೋಪಿ ಮನೋಜ್ ವಿರುದ್ಧ ಮಂಗಳೂರು, ಸುರತ್ಕಲ್, ಪಣಂಬೂರು, ಕಾವೂರು, ಬರ್ಕೆ, ಮುಲ್ಕಿ, ಬಜಪೆ ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವಬೆದರಿಕೆ ಸಹಿತ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಚಿತ್ತರಂಜನ್ ಪೂಜಾರಿ ವಿರುದ್ಧ ಸುರತ್ಕಲ್, ಮುಲ್ಕಿ, ಕಾರ್ಕಳ ನಗರ ಠಾಣೆಗಳಲ್ಲಿ ಹಲ್ಲೆ, ಜೀವಬೆದರಿಕೆ, ಶಸ್ತ್ರಾಸ್ತ ಕಾಯ್ದೆ ಸಹಿತ ಐದು ಕೇಸ್ ಗಳಿವೆ. ಚೇತು ಪಡೀಲ್ ವಿರುದ್ಧ ಕದ್ರಿ, ಬಜಪೆ, ಕಾವೂರು ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವಬೆದರಿಕೆ ಸಹಿತ ಐದು ಪ್ರಕರಣಗಳು ದಾಖಲಾಗಿವೆ. ರಮೇಶ್ ಪೂಜಾರಿ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಮತ್ತು ದೀಕ್ಷಿತ್ ಶೆಟ್ಟಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ತಲಾ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಿಂದ ಬೆನ್ನತ್ತಿದ್ದ ಆರೋಪಿಗಳು:
ಬಂಧಿತ ಆರೋಪಿಗಳಿಂದ ಈಗಾಗಲೇ ಕೃತ್ಯ ಬಳಸಿದ ಮತ್ತು ಪರಾರಿಯಾಗಲು ಉಪಯೋಗಿಸಿದ ಮೂರು ಕಾರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಣಕಾಸಿನ ವ್ಯವಹಾರ ಹಾಗೂ ಹಳೆಯ ವೈಷಮ್ಯದಿಂದ ಕೊಲೆ ಮಾಡಲಾಗಿದ್ದು, ಆರೋಪಿಗಳು ಕಿಶನ್ ಹೆಗ್ಡೆಯನ್ನು ಮಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದಿದ್ದು, ಹಿರಿಯಡಕ ಪೇಟೆಯಲ್ಲಿ ಕಾರಿನಿಂದ ಇಳಿದು ದೇವಸ್ಥಾನಕ್ಕೆ ಹೋಗುತ್ತಿದ್ದ ಕಿಶನ್ ನನ್ನು ಹಿಂಬದಿಯಿಂದ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಇಂದು ರಾತ್ರಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು. ಕೊಲೆಯಾಗಿರುವ ಕಿಶನ್ ಹೆಗ್ಡೆ, ಕೊಲೆ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದರು.
ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಮತ್ತು ಬ್ರಹ್ಮಾವರ ಎಸ್ಸೈ ರಾಘ ವೇಂದ್ರ ಅವರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ. ಈ ಕಾರ್ಯಾ ಚರಣೆಯಲ್ಲಿ ಎಎಸ್ಸೈ ಕೃಷ್ಣಪ್ಪ, ಸಿಬ್ಬಂದಿಗಳಾದ ವಾಸು ಪೂಜಾರಿ, ಗಣೇಶ್, ಪ್ರದೀಪ್, ರವಿ, ಶೇಖರ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ನಿರೀಕ್ಷಕ ಮಂಜುನಾಥ್, ಡಿಸಿಐಬಿ ನಿರೀಕ್ಷಕ ಮಂಜಪ್ಪ, ಕಾಪು ನಿರೀಕ್ಷಕ ಮಹೇಶ್ ಪ್ರಸಾದ್, ಬ್ರಹ್ಮಾವರ ಠಾಣೆ ಸಿಬ್ಬಂದಿಗಳಾದ ದಿಲೀಪ್ ಸತೀಶ್, ಅಣ್ಣಪ್ಪ, ಕೋಟ ಎಸ್ಸೈ ಸಂತೋಷ್, ಚಾಲಕ ಮಂಜು, ಹಿರಿಯಡ್ಕ ಎಸ್ಸೈ ಸುಧಾಕರ ತೋನ್ಸೆ, ಎಎಸ್ಸೈಗಳಾದ ಗಂಗಪ್ಪ, ಜಯಂತ್, ಪರಮೇಶ್ವರ್, ಸಿಬ್ಬಂದಿಗಳಾದ ದಿನೇಶ್, ರಘು, ಸಂತೋಷ್, ಉದಯ ಕಾಮತ್, ಶಶಿ ಕುಮಾರ್, ನಿತಿನ್, ಹರೀಶ್, ಇಂದ್ರೇಶ್, ಭೀಮಪ್ಪ, ಆನಂದ ಸಹಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಇದ್ದರು.