ಹಿರಿಯಡಕ: ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣ; ಮನೋಜ್ ಕೋಡಿಕೆರೆ ತಂಡ ವಿರುದ್ಧ ದೂರು ದಾಖಲು

ಹಿರಿಯಡಕ: ಹಿರಿಯಡಕ ಪೇಟೆಯಲ್ಲಿ ಗುರುವಾರ ನಡೆದ ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಕೋಡಿಕೆರೆ ತಂಡ ಮೇಲೆ ಪ್ರಕರಣ ದಾಖಲಾಗಿದೆ.

ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ದ್ವೇಷದಲ್ಲಿ ಮನೋಜ್ ತಂಡ ಈ ಕೃತ್ಯ ಎಸಗಿದೆ ಎಂದು ದಿವ್ಯರಾಜ್ ಶೆಟ್ಟಿ ಹಿರಿಯಡ್ಕ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತಂಡ ತನಿಖೆ ಚುರುಕುಗೊಳಿಸಿದ್ದು, ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ ಮತ್ತೊಂದು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೊಲೆ ಎಸಗಿದ ಬಳಿಕ ಎರಡು ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿಗಳು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದ ರಿಟ್ಜ್ ಕಾರನ್ನು ಪೊಲೀಸರು ಗುರುವಾರ ರಾತ್ರಿ ವೇಳೆ ವಶಪಡಿಸಿಕೊಂಡಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ವತ್ತೂರು ಎಂಬಲ್ಲಿ ಬಿಟ್ಟು ಹೋಗಿರುವ ಇನ್ನೋವಾ ಕಾರನ್ನು ಶುಕ್ರವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸೆ.24ರಂದು ಮಧ್ಯಾಹ್ನ ದಿವ್ಯರಾಜ್ ಶೆಟ್ಟಿ, ಕಿಶನ್ ಹೆಗ್ಡೆ ಹಾಗೂ ಹರಿ ಪ್ರಸಾದ್ ಶೆಟ್ಟಿ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ಹೋಗಲು ಕಾರಿನಿಂದ ಇಳಿಯುತ್ತಿರುವಾಗ ಎರಡು ಕಾರಿನಲ್ಲಿ ಬಂದ 7-8 ಮಂದಿ ದುಷ್ಕರ್ಮಿಗಳು ಲಾಂಗ್ ನಿಂದ ಕೊಚ್ಚಿ ಕಿಶನ್ ಹೆಗ್ಡೆಯನ್ನು ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹರಿಪ್ರಸಾದ್ ಶೆಟ್ಟಿ ಎಂಬವರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡವನ್ನು ರಚಿಸಲಾಗಿದೆ. ಬೆಂಗಳೂರು ಹಾಗೂ ಮಂಗಳೂರು ಹಾಗೂ ಇತರ ಭಾಗಗಳಿಗೆ ತೆರಳಿರುವ ತಂಡ, ಆರೋಪಿಗ ಶೋಧ ಕಾರ್ಯ ಮುಂದುವರೆಸಿದೆ.