ನಿಮ್ಮ ಮಗುವಿಗೆ ರೋಟಾವೈರಸ್ ಲಸಿಕೆ ನೀಡಲು ಮರೆಯಬೇಡಿ !:ರೋಟಾವೈರಸ್ ಲಸಿಕೆ ಯಾಕೆ ನೀಡಬೇಕು? ಇಲ್ಲಿದೆ ಮಾಹಿತಿ

ಉಡುಪಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಭಾರತದ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿದ್ದು, ಇದು 2.9 ಕೋಟಿ ಗರ್ಭಿಣಿಯರು ಮತ್ತು 2.67 ಕೋಟಿ ನವಜಾತ ಶಿಶುಗಳ ಗುರಿ ಹೊಂದಿದೆ. ಲಸಿಕಾ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಲು ಭಾರತ ಸರ್ಕಾರವು ಹಲವು ಲಸಿಕೆಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪರಿಚಯಿಸಿದ್ದು, ನಮ್ಮ ರಾಜ್ಯದಲ್ಲಿ ರೋಟಾವೈರಸ್ ಲಸಿಕೆಯನ್ನು ಆಗಸ್ಟ್ 2019 ರಿಂದ ಪರಿಚಯಿಸಲಾಗುತ್ತಿದೆ.

ರೋಟಾವೈರಸ್ ಲಸಿಕೆಯನ್ನು ಏಕೆ ನೀಡಬೇಕು?

ಮಕ್ಕಳಲ್ಲಿ ರೋಟಾವೈರಸ್ ಸೋಂಕನ್ನು ನಿಯಂತ್ರಿಸಲು ರೋಟಾವೈರಸ್ ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅತಿಸಾರ ಭೇದಿಯು ಜಾಗತಿಕವಾಗಿ ಮತ್ತು ಭಾರತದಲ್ಲಿ ಮಕ್ಕಳಲ್ಲಿ ಮರಣ ಸಂಭವಿಸಲು ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ 5 ವರ್ಷದೊಳಗಿನ ಮಕ್ಕಳ ಶೇ.9 ರಷ್ಟು ಮತ್ತು ಭಾರತದಲ್ಲಿ ಶೇ.10ರಷ್ಟು ಅತಿಸಾರ ಭೇದಿಯಿಂದ ಸಾವನ್ನಪ್ಪುತ್ತಿದ್ದಾರೆ.

ಮಾಹಿತಿಯ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.40 ರಷ್ಟು ಮಕ್ಕಳು ಅತಿಸಾರ ಭೇದಿಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 32.7 ಲಕ್ಷ ಮಕ್ಕಳು ಹೊರರೋಗಿಗಳಾಗಿ ಮತ್ತು 8.72 ಲಕ್ಷದಷ್ಟು ಮಕ್ಕಳು ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ ಹಾಗೂ 78,000 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಅಪೌಷ್ಠಿಕತೆ, ನಿಶ್ಯಕ್ತಿ ಮತ್ತು ದೀರ್ಘಕಾಲೀನ ಪೌಷ್ಠಿಕಾಂಶದ ಕೊರತೆಗಳಿಗೂ ಸಹ ರೋಟಾವೈರಸ್ ಪ್ರಮುಖ ಕಾರಣವಾಗಿದೆ.

ರೋಟಾವೈರಸ್‍ ಹೇಗೆ ಹರಡುತ್ತೆ?

ರೋಟಾವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ರೋಟಾವೈರಸ್ ಅತಿಸಾರದಿಂದ ಬಳಲುತ್ತಿರುವ ರೋಗಿಗಳು ದೊಡ್ಡ ಪ್ರಮಾಣದಲ್ಲಿ ವೈರಸ್ಸನ್ನು ಮಲದ ಮೂಲಕ ಹೊರಚೆಲ್ಲುತ್ತಾರೆ. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕಲುಷಿತವಾದ ನೀರು, ಆಹಾರ ಮತ್ತು ಕೊಳೆಯಾದ ಕೈಗಳ ಸಂಪರ್ಕಕ್ಕೆ ಬರುವುದರಿಂದ  ಹರಡುತ್ತದೆ ಹಾಗೂ ಈ ವೈರಾಣು ತುಂಬಾ ಸಮಯದವರೆಗೆ ಮಕ್ಕಳ ಕೈಯಲ್ಲಿ ಮತ್ತು ಇತರ ಗಟ್ಟಿಯಾದ ಮೇಲ್ಪದರಗಳಲ್ಲಿ ಜೀವಂತವಾಗಿರಬಹುದು.

Wordcard for rotavirus with picture of virus illustration

ರೋಟಾವೈರಸ್ ಸೋಂಕಿನ ರೋಗನಿರ್ಣಯ ಮತ್ತು ಚಿಕಿತ್ಸೆ:

ಮೇಲ್ನೋಟಕ್ಕೆ ರೋಟಾವೈರಸ್ ಸೋಂಕನ್ನು ಇತರ ಸಾಂಕ್ರಾಮಿಕ ಅತಿಸಾರದಿಂದ ವಿಂಗಡಿಸಲು ಸಾಧ್ಯವಿಲ್ಲ ಮತ್ತು ರೋಟಾವೈರಸ್ ಸೋಂಕಿನ ರೋಗನಿರ್ಣಯವನ್ನು ಧೃಢೀಕರಿಸಲು ಮಲದ ಪ್ರಯೋಗಾಲಯ ಪರೀಕ್ಷೆಗಳು ಅಗತ್ಯವಾಗಿರುತ್ತದೆ. ಮಲದಲ್ಲಿನ ರೋಟಾವೈರಸ್‍ನ್ನು ಪತ್ತೆಹಚ್ಚಲು ವಿವಿಧ ಪರೀಕ್ಷೆಗಳು ಲಭ್ಯವಿದೆ.

ರೋಟಾವೈರಸ್ ಸೋಂಕಿನಿಂದ ರಕ್ಷಣೆ ಪಡೆಯುವ ಏಕೈಕ ನಿರ್ದಿಷ್ಟ ಸಾಧನವೆಂದರೆ ರೋಟಾವೈರಸ್ ಲಸಿಕೆ ಹಾಕಿಸುವುದು.

ರೋಟಾವೈರಸ್ ಲಸಿಕೆ:

ರೋಟಾವೈರಸ್ ಲಸಿಕೆಯನ್ನು ಬಾಯಿಯ ಮೂಲಕ ಮಕ್ಕಳಿಗೆ 6, 10 ಮತ್ತು 14 ವಾರಗಳ ವಯಸ್ಸಿನಲ್ಲಿ ನೀಡಲಾಗುವುದು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಲಸಿಕೆಗಳ ಜೊತೆಯಲ್ಲಿ ರೋಟಾವೈರಸ್ ಲಸಿಕೆಯನ್ನು ನೀಡಲಾಗುವುದು.

ರೋಟಾವೈರಸ್ ಲಸಿಕೆಯು ತೀವ್ರವಾದ ಮತ್ತು ಮಾರಣಾಂತಿಕ ರೋಟಾವೈರಸ್ ಅತಿಸಾರ ಭೇದಿಯಿಂದ ಕಾಪಾಡಲು ಅತಿ ಪ್ರಮುಖವಾಗಿರುತ್ತದೆ. ಭಾರತದಲ್ಲಿ ತೀವ್ರ ಅತಿಸಾರ ಭೇದಿಯಿಂದ ಕಾಪಾಡಲು ರೋಟಾವೈರಸ್ ಲಸಿಕೆಯು ಶೇ.40-60% ಪರಿಣಾಮಕಾರಿಯಾಗಿರುತ್ತದೆ.

ಲಸಿಕೆ ಪ್ರಾರಂಭಿಸುವ ಹಂತದಲ್ಲಿ 6 ವಾರ ವಯಸ್ಸಿನ ಶಿಶುಗಳಿಗೆ ರೋಟಾ ಲಸಿಕೆ ಮೊದಲ ವರಸೆಯನ್ನು ಮೊದಲ ವರಸೆ ಪೆಂಟಾವಾಲೆಂಟ್ ಮತ್ತು ಒ.ಪಿ.ವಿ ಲಸಿಕೆಗಳ ಜೊತೆಯಲ್ಲಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.